ಆಸ್ತಿ ತೆರಿಗೆ, ನೀರು ದರ ಏರಿಕೆ

Published on

ಬಳ್ಳಾರಿ : ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಹಾಗೂ ನೀರಿನ ದರ ಪರಿಷ್ಕರಣೆಗೊಳಿಸಿದ್ದು ಮುಂಬರುವ ಏಪ್ರೀಲ್ ತಿಂಗಳಿನಿಂದ ಹೊಸ ದರ ಜಾರಿಗೆ ಬರಲಿದೆ ಎಂದು ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪ್ರತಿ ಮೂರು ವರ್ಷಕ್ಕೊಮ್ಮೆ ದರ ಪರಿಷ್ಕರಿಸಲಾಗುತ್ತಿದ್ದು. ಆದರಂತೆ, ಪ್ರಸ್ತುತ ನೀರು ಸರಬರಾಜು ನಿರ್ವಹಣೆಗೆ ತಗಲುವ, ದುರಸ್ತಿ ವೆಚ್ಚ ಹಾಗೂ ವಿದ್ಯುತ್ ದರಗಳಿಗನುಸಾರವಾಗಿ ದರ ಪರಿಷ್ಕರಣೆಗೊಳಿಸಲಾಗಿದೆ. ಗೃಹ 175 ಯಿಂದ 250 ರೂ., ಗೃಹೇತರ 400 ರೂ. ಯಿಂದ 525 ರೂ. ವಾಣಿಜ್ಯ, ಕೈಗಾರಿಕೆಗೆ 700 ರೂ. ಯಿಂದ 920 ರೂ. ಹೆಚ್ಚಿಸಲಾಗಿದೆ. ಗೃಹ ಬಳಕೆಗೆ ನೀರಿನ ದರ 250 ರೂ. ನಿಗದಿಪಡಿಸಿದ್ದನ್ನು ಪಾಲಿಕೆ ಸದಸ್ಯರ ಅಕ್ಷೇಪಣೆ ಮೇರೆಗೆ 200 ರೂ. ದರ ನಿಗದಿ ಮಾಡಲಾಗಿದೆ. ಗೃಹತೇರ ಬಳಕೆಗಾಗಿ ಕಡ್ಡಾಯವಾಗಿ ಮಾಲೀಕರು ಪಾಲಿಕೆಯಿಂದ ವಾಟರ್ ಮೀಟರ್ ಅಳವಡಿಸಬೇಕು. ಗೃಹ ಬಳಕೆಗಾಗಿ ಮೊದಲ ಬಾರಿಗೆ ನಳ ಸಂಪರ್ಕಗೊಳಿಸಲು ಐದು ಸಾವಿರ ರೂ. ಯಿಂದ 7500 ರೂ., ಗೃಹೇತರ ಹತ್ತು ಸಾವಿರ ರೂ. ಯಿಂದ ಹದಿನೈದು ಸಾವಿರ ರೂ. ಹಾಗೂ ವಾಣಿಜ್ಯಕ್ಕಾಗಿ ಹತ್ತು ಸಾವಿರ ರೂ. ಯಿಂದ ಇಪ್ಪತೈದು ಸಾವಿರ ರೂ. ಗೆ ಹೆಚ್ಚಿಸಲಾಗಿದೆ ಎಂದರು.

ಒಳ ಚರಂಡಿ ನಿರ್ವಹಣೆಯ ಗೃಹ ಬಳಕೆಗೆ 35 ರೂ. ಯಿಂದ ನೂರು ರೂ., ಲಾಡ್ಜಿಂಗ್ ಮತ್ತಿ ಬೊರ್ಡಿಂಗ್ 35 ರೂ. ರಿಂದ ಎರಡು ನೂರು ರೂ., ಹೋಟೆಲ್ 35 ರೂ. ಯಿಂದ 600 ರೂ. ಪ್ರತಿ ಬೇಸಿನ್‌ಗೆ ಪರಿಷ್ಕರಣೆಗೊಳಿಸಲಾಗಿದೆ. ಮೊದಲ ಬಾರಿ ಒಳಚರಂಡಿ ಸಂಪರ್ಕಿಸುವ ಗೃಹಕ್ಕೆ 500 ಯಿಂದ ಮೂರು ಸಾವಿರ ರೂ., ಲಾಡ್ಜಿಂಗ್ ಸಾವಿರ ರೂ. ಯಿಂದ ಹದಿನೈದು ಸಾವಿರ ರೂ. ಹಾಗೂ ಹೊಟೇಲ್‌ಗೆ ಸಾವಿರ ರೂ. ಯಿಂದ 20 ಸಾವಿರ ರೂ. ಎಂದು ಮಂಡಿಸಿದರು.

ಅನುದಾನ ಹಂಚಿಕೆಯಲ್ಲಿ ವ್ಯತ್ಯಾಸ : ಇಲ್ಲಿನ ವಿವಿಧ ವಾರ್ಡ್‌ಗಳ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ಪಾಲಿಕೆಗೆ 127.5 ಕೋಟಿ ರೂ. ಅನುಮೋದನೆ ದೊರೆತಿದೆ. ಆದರೆ, ಮೇಯರ್ ಹಾಗೂ ಆಯುಕ್ತರು ತಮಗೆ ಅನುಕೂಲವಿರುವ ವಾರ್ಡ್‌ಗಳಿಗೆ ಬಿಡುಗಡೆಗೊಳಿಸಿಕೊಂಡು 37, 38ನೇ ವಾರ್ಡ್‌ಗಳನ್ನು ಕಡೆಗಣಿಸಿದ್ದಾರೆ ಎಂದು 38 ನೇ ವಾರ್ಡ್ ಸದಸ್ಯ ಕುಬೇರ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ವಿಷಯಕ್ಕೆ ದನಿಗೂಡಿಸಿದ ಮೂರನೇ ವಾರ್ಡ್ ಸದಸ್ಯ ಎಂ.ಪ್ರಭಂಜನಕುಮಾರ ನನ್ನ ವಾರ್ಡ್ ಸೇರಿದಂತೆ ಐದಾರು ವಾರ್ಡ್‌ಗಳಿಗೆ ಅನುದಾನ ಹಂಚಿಕೆಗೊಳಿಸಿಲ್ಲ. ಆದ್ದರಿಂದ, ಅನುಮೋದನೆ ದೊರೆತಿರುವ ಅನುದಾನವನ್ನು ರದ್ದುಗೊಳಿಸಬೇಕು ಎಂದು ಕೋರಿದರು. ಅನುದಾನ ಹಂಚಿಕೆಯಲ್ಲಿ ನನ್ನ ಪಾತ್ರ ಇರುವುದು ಸಾಬೀತದಾರೆ ಮೇಯರ್ ಸ್ಥಾನದಿಂದ ರಾಜೀನಾಮೆ ನೀಡುವೆ ಎಂದು ಮುಲ್ಲಂಗಿ ನಂದೀಶ್ ಸವಾಲು ಹಾಕಿದರು. ಕೆಲ ತಿಂಗಳಲ್ಲೇ ಪಾಲಿಕೆಗೆ ಸರ್ಕಾರದಿಂದ ಪ್ರೋತ್ಸಾಹಕ ಧನ ಬರಲಿದ್ದು ಆದರಲ್ಲಿ ಕಡೆಗಣಿಸಿರುವ ಎಲ್ಲ ವಾರ್ಡ್‌ಗಳಿಗೆ ಹಣ ಬಿಡುಗಡೆಗೊಳಿಸಲಾಗುವುದು ಎಂದು ಆಯುಕ್ತ ಖಲೀಲ್ ಸಾಬ್ ಭರವಸೆ ನೀಡಿದರು. ಬಳಿಕೆ ಸದ್ಯ ಬಿಡುಗಡೆಯಾಗಿರುವ ಅನುದಾನವನ್ನು ಅಭಿವೃದ್ಧಿಗೆ ಬಳಕೆಯಾಗಲಿ ಎಂದು ಕೆಲ ಪಾಲಿಕೆ ಸದಸ್ಯರು ಪ್ರಸ್ತಾಪಿಸಿದರು.

ಪತಿಯ ಕಾರು ಬಾರು : ವಾರ್ಡ್‌ಗಳಿಗೆ ಅನುದಾನ ಹಂಚಿಕೆಯ ಬಗ್ಗೆ ವಿಷಯ ಪ್ರಸ್ತಾಪದ ವೇಳೆ ಮಾಜಿ ಉಪ ಮೇಯರ್, 37ನೇ ವಾರ್ಡ್ ಸದಸ್ಯೆ ಮಾಲನ ಬಿ. ಬದಲಾಗಿ ಪತಿ ಸಭೆಯಲ್ಲಿ ಮೇಯರ್‌ನನ್ನು ಪ್ರಶ್ನಿಸಿದರು. ಕೆಲ ವಾರ್ಡ್‌ಗಳಿಗೆ ಅನುದಾನ ಹಂಚಿಕೆಯಾಗಿರುವ ಬಗ್ಗೆ ದಾಖಲೆಗಳನ್ನು ಪ್ರಸ್ತುತಪಡಿಸಿದರು. ಇದಕ್ಕೆ ಶಾಸಕ, ಮೇಯರ್ ಹಾಗೂ ಆಯುಕ್ತರು ಯಾರು ಕೂಡ ಪ್ರತಿಕ್ರಿಯಿಸಿದ ಕುಳಿತಿದ್ದರು. ಸಭೆಯಿಂದ ಅರ್ಧದಲ್ಲೇ ಶಾಸಕರು ಖಾಸಗಿ ಕಾರ್ಯಕ್ರಮದ ನಿಮಿತ್ತ ಹೊರ ನಡೆದರು. ಬಿಜೆಪಿಯ ಕೆಲ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಕೆಲ ಸದಸ್ಯರು ಯಾವ ವಿಷಯಕ್ಕೂ ಮಾತನಾಡದೆ ಮೌನವಾಗಿ ಕುಳಿತಿದ್ದರು. ಎರಡು ತಾಸುಗೂ ಅಧಿಕ ವಾರ್ಡ್‌ಗಳಿಗೆ ಅನುದಾನ ಹಂಚಿಕೆಯ ವಿಷಯವೇ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net