ಬಳ್ಳಾರಿ ; ಜಿಲ್ಲೆಯಲ್ಲಿ ಹಿಂಗಾರಿನಲ್ಲಿ ಬೆಳೆದಿರುವ ಜೋಳವನ್ನು ಬೆಂಬಲ ಬೆಲೆಯಡಿ ಖರೀದಿ ಕೇಂದ್ರದಲ್ಲಿ ಯಾವುದೇ ಮಿತಿಯಿಲ್ಲದೆ ಖರೀದಿಸಲು ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಅವರೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು. ಜೋಳ ಖರೀದಿ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ರೈತರಿಗೆ ತೊಂದರೆಯಾಗದಂತೆ ಖರೀದಿಸಲು ಆದೇಶಿಸಲಾಗುವುದು ಎಂದು ಹೇಳಿದರು.
ಇತ್ತೀಚೆಗೆ ಮಿತಿಯಿಲ್ಲದೆ ಜೋಳವನ್ನು ಖರೀದಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘವು ಡಿಸಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಶಾಸಕ ನಾಗೇಂದ್ರ, ನಾರಾಭರತರೆಡ್ಡಿ ಪ್ರತಿಭಟನೆ ಕೈಬಿಡಲು ಮನವಿ ಮಾಡಿದ್ದರಿಂದ ಧರಣಿ ಅಂತ್ಯಗೊಳಿಸಲಾಗಿತ್ತು.