ಬಳ್ಳಾರಿ : ಯುವಕರು ಉದ್ಯಮ ಸಂಬಂಧಿತ ಕೌಶಲ್ಯಗಳನ್ನು ಅಳವಡಿಸಿಕೊಂಡಲ್ಲಿ ಉದ್ಯೋಗ, ಜಾಗತಿಕ ಕ್ಷೇತ್ರದಲ್ಲಿ ನಿರ್ಣಾಯಕವಾದ ಪಾತ್ರವನ್ನು ನಿರ್ವಹಿಸುತ್ತಾರೆ ಎಂದು ಕಲಬುರಗಿಯ ಕಾಲೇಜು ಶಿಕ್ಷಣ ಪ್ರಾದೇಶಿಕ ಜಂಟಿ ನಿರ್ದೇಶಕ ಡಾ.ಬಿ.ಗೊಳ್ಳೆ ಶಿವಶರಣ ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ವಿಎಸ್‌ಕೆ ವಿವಿ ಕಲಿಕೆ ಜತೆಗೆ ಕೌಶಲ್ಯ 2.0 ಯೋಜನೆ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರದಲ್ಲಿ ಮಾತನಾಡಿದರು. ಶಿಕ್ಷಣ ಕ್ಷೇತ್ರ ವೇಗವಾಗಿ ಬದಲಾಗುತ್ತಿರುವುದರಿಂದ ಉದ್ಯೋಗ ಸಂಬಂಧಿತ ಕೌಶಲ್ಯಗಳು ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯ ವಂಚಿತರ ಪ್ರಮಾಣ 60% ರಷ್ಟು ಇದೆ. ಬಹುಮುಖ ಪ್ರತಿಭೆಗಳು ಮಾತ್ರ ಉದ್ಯೋಗಕ್ಕೆ ಆರ್ಹರಾಗಿದ್ದಾರೆ. ವಿದ್ಯಾರ್ಥಿಗಳು ಭವಿಷ್ಯದಲ್ಲಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿಯ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಆರ್.ರಾಗಪ್ರಿಯ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕೌಶಲ್ಯ ಆಧಾರಿತ ಶಿಕ್ಷಣ ಮಹತ್ವಪೂರ್ಣವಾಗಿದೆ. ಈಗಾಗಲೇ ಕೌಶಲ್ಯಾಧಾರಿತ ಶಿಕ್ಷಣವನ್ನು ಹಲವಾರು ವಿದ್ಯಾರ್ಥಿಗಳು ಪಡೆದು ಒಳ್ಳೆಯ ಸ್ಥಾನದಲ್ಲಿದ್ದಾರೆ ಎಂದು ಹೇಳಿದರು.
ವಿಎಸ್‌ಕೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಒಲವು ಹೊಂದಬೇಕಾಗಿದೆ. ವಿದ್ಯಾರ್ಥಿಗಳು ಶಿಕ್ಷಕರಿಂದ ಸ್ಪೂರ್ತಿ ಪಡೆದು, ಕೌಶಲ್ಯಗಳ ಕೊರತೆಯನ್ನು ಹೋಗಲಾಡಿಸಬೇಕು. ಕೌಶಲ್ಯ ಆಧಾರಿತ ಶಿಕ್ಷಣದಿಂದ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ನಾವೆಲ್ಲರು ಶ್ರಮಿಸೋಣ ಎಂದರು.
ವಿವಿ ಕುಲಸಚಿವ ಡಾ.ಎನ್.ಎಂ. ಸಾಲಿ ಮಾತನಾಡಿ, ವಿಶ್ವವಿದ್ಯಾಲಯಗಳು ಸಾಂಪ್ರಾದಾಯಕದಿಂದ ವೈಜ್ಞಾನಿಕತೆಯಡೆಗೆ ಸಾಗಬೇಕಾಗಿದೆ. ಶಿಕ್ಷಣದಲ್ಲಿ ಹಲವಾರು ಕೌಶಲ್ಯಗಳಿಂದ ಜಗತ್ತು ಮುಂದುವರೆಯುತ್ತಿದೆ. ನಾವು ಅದರೊಂದಿಗೆ ಸಾಗಬೇಕಾಗಿದೆ ಎಂದರು.