ಕೌಶಲ ಕಲಿಕೆಗೆ ಆದ್ಯತೆ ವಹಿಸಿ

Published on

ಬಳ್ಳಾರಿ : ಸಾಂಪ್ರದಾಯಿಕ ಕಲಿಕೆಯ ಜತೆಯಲ್ಲಿ ಕೌಶಲಯುತ ಶಿಕ್ಷಣ ಇಂದಿನ ಆದ್ಯತೆಯಾಗಿದ್ದು, ವಿದ್ಯಾರ್ಥಿಗಳು ಇವುಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಲಿವಿ ಲರ್ನಿಂಗ್ ಸೆಂಟರ್‌ನ ಸಂಸ್ಥಾಪಕ ಪ್ರೊ.ವಿನೋದ್ ಕುಮಾರ್ ಮೂರ್ತಿ ಹೇಳಿದರು.

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಭವನದಲ್ಲಿ 7 ದಿನಗಳವರೆಗೆ ಆಯೋಜಿಸಿರುವ ವಿದ್ಯಾರ್ಥಿಗಳ ಕಲಿಕಾ ಪುಷ್ಟೀಕರಣ ಹಾಗೂ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃತಕ ಬುದ್ಧಿಮತ್ತೆಯ ಕಾಲಮಾನದಲ್ಲಿ ಇಂದು ಅನೇಕ ನೌಕರರು ಕೌಶಲ್ಯಯುತ ಕಲಿಕೆ ಇಲ್ಲದೆ ತಮ್ಮ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಕಿವಿ ಮಾತು ಹೇಳಿದರು.

ವಿಎಸ್ ಕೆ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ. ಸಾಲಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಔದ್ಯೋಗಿಕ ರಂಗದಲ್ಲಿ ವಿಷಯ ಜ್ಞಾನದ ಜತೆಗೆ ಕೌಶಲ್ಯ ಆಧಾರಿತ ಕಲಿಕೆಗೆ ಒತ್ತು ನೀಡುವುದರಿಂದ ವಿದ್ಯಾರ್ಥಿಗಳು ತಮಗೆ ಬೇಕಾದ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಈ ಮಾದರಿ ಕಾರ್ಯಕ್ರಮಗಳು ಅವರ ನ್ಯೂನತೆ ಅರಿತುಕೊಳ್ಳಲು ಮತ್ತು ಸಾಮರ್ಥ್ಯ ವೃದ್ಧಿಸಿಕೊಳ್ಳಲು ಅನುಕೂಲವಾಗುತ್ತವೆ ಎಂದರು.

ಪ್ರಥಮ ದಿನದ ವಿಷಯದ ಭಾಗವಾಗಿ ವಿವಿಯ ವಾಣಿಜ್ಯಶಾಸ್ತ್ರ, ನಿರ್ವಹಣಾಶಾಸ್ತ್ರ, ಎಂಸಿಎ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net