ತುಂಗಭದ್ರಾ ರಾಷ್ಟ್ರೀಯ ಯೋಜನೆ ಘೋಷಿಸಲಿ; ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒತ್ತಾಯ ಪ್ರಧಾನಿ ನರೇಂದ್ರ ಮೋದಿಗೆ ಪತ್ರ

VS Ugrappa
ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಸುದ್ದಿಗೋಷ್ಠಿ
Published on

ಬಳ್ಳಾರಿ: ತುಂಗಭದ್ರಾ ರಾಷ್ಟ್ರೀಯ ಯೋಜನೆ ಘೋಷಣೆ ಮಾಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಗೆ ಆ.11ರಂದು ಪತ್ರ ಬರೆಯಲಾಗಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 3.62 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿರುವ ತುಂಗಭದ್ರಾ ಜಲಾಶಯವನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಣೆ ಮಾಡಬೇಕು.

ಪ್ರತಿ ವರ್ಷವೂ ಜಲಾಶಯದಿಂದ ಸರಾಸರಿ 200 ರಿಂದ 300 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದು ಸಮುದ್ರದ ಪಾಲಾಗುವುದನ್ನು ತಡೆಯಲು ಹೂಳು ತೆಗೆಸಬೇಕು. ಇಲ್ಲದಿದ್ದರೆ ಪರ್ಯಾಯವಾಗಿ ಜಲಾಶಯ ನಿರ್ಮಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.

ತುಂಗಭದ್ರಾ ಜಲಾಶಯದಲ್ಲಿ ಪ್ರತಿ ವರ್ಷ ಸರಾಸರಿ 432 ಟಿಎಂಸಿ ನೀರಿನ ಲಭ್ಯತೆ ಇದ್ದು, 132 ಟಿಎಂಸಿ ನೀರು ಸಂಗ್ರಹಣೆಯಾಗಲಿದೆ. ಉಳಿದ ನೀರು ಹೆಚ್ಚುವರಿಯಾಗಿ ಸಮುದ್ರದ ಪಾಲಾಗುತ್ತಿದೆ. ಈ ನೀರು ಸದ್ಬಳಕೆಯಾದಲ್ಲಿ 20 ರಿಂದ 25 ಲಕ್ಷ ಹೆಕ್ಟೇರ್‌ಗೆ ನೀರು ಪೂರೈಸಬಹುದಾಗಿದೆ ಎಂದರು.

ಗಂಗಾ-ಕಾವೇರಿ-ಗೋದಾವರಿ ನದಿ ಜೋಡಣೆ ಮಾಡುವ ವಿಚಾರದ ಕುರಿತು ಪ್ರಸ್ತಾಪಿಸಿ, ಕೇಂದ್ರ ಸರ್ಕಾರ ಬರ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮತೋಲನ ಕಾಪಾಡುವ ಸಲುವಾಗಿ ನದಿ ಜೋಡಣೆ ಮಾಡುವುದಾಗಿ ಹೇಳಿತ್ತು.

ಆದರೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ನೀರು ರಾಷ್ಟ್ರೀಯ ಸಂಪತ್ತು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಕಲ್ಲುಕಂಬ ಪಂಪಾಪತಿ, ಲೋಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net