ಬಳ್ಳಾರಿ ; ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಮೇಲೆ ಹೊರೆಯಾಗಿದೆ ಎಂದು ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ನಗರದ ರಾಬಕೊವಿ ಹಾಲು ಒಕ್ಕೂಟದ ಕಚೇರಿ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ಘಟಕದಿಂದ ಮೆಗಾ ಡೈರಿ ಸ್ಥಳಾಂತರ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಇತ್ತೀಚೆಗೆ ಹಾಲಿನ ದರ, ವಿದ್ಯುತ್ ದರ, ಬಸ್ ಪ್ರಯಾಣ ದರ ಸ್ಟಾಂಪ್ ಶುಲ್ಕ, ಮದ್ಯದ ದರ ಹೆಚ್ಚಳವು ಜನಸಾಮಾನ್ಯರು, ಮಧ್ಯಮ ವರ್ಗದವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ದಿನೇದಿನೆ ಹೊಸ ಹೊಸ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಕೆಲ ದಿನಗಳ ಹಿಂದೆ ಸರ್ಕಾರದ ನಿರ್ಧಾರದಿಂದ ಡೀಸೆಲ್ ದರವೂ ಹೆಚ್ಚಿದ್ದು, ದಿನಬಳಕೆ ವಸ್ತುಗಳು, ಸರಕು ಸಾಮಗ್ರಿಗಳದರವೂ ಏರಿಕೆ ಕಂಡಿದೆ. ಆದ್ದರಿಂದ, ರಾಜ್ಯ ಸರ್ಕಾರ ಏರಿಸಿದ ಎಲ್ಲ ದರಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಅಲ್ಪಸಂಖ್ಯಾತರನ್ನು ಖುಷಿ ಪಡಿಸಲು ಸರ್ಕಾರಿ ಕಾಮಗಾರಿಗಳಲ್ಲಿ ಶೇ.4%ರಷ್ಟು ಮೀಸಲಾತಿ ಕೊಡುವ ಸರ್ಕಾರದ ತುಷ್ಟಿಕರಣದ ನಿರ್ಧಾರವನ್ನು ವಿರೋಧಿಸುತ್ತೇವೆ. ಧರ್ಮ ಆಧಾರಿತ ಮೀಸಲಾತಿ ಕೊಡಲಾಗದು ಎಂದು ಸಂವಿಧಾನ ಸ್ಪಷ್ಟವಾಗಿ ತಿಳಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಸೇರಿ ವಿವಿಧ ಕೋರ್ಟ್‌ಗಳೂ ತೀರ್ಪು ಕೊಟ್ಟಿವೆ. ಇದು ಸಂವಿಧಾನ ವಿರೋಧಿ ಎಂಬುದು ಗೊತ್ತಿದ್ದರೂ ನಾಡಿನ ಹಿಂದೂಗಳ ಮೇಲೆ ದೌರ್ಜನ್ಯ- ಅವಮಾನ ಮಾಡುವ ನಿರ್ಧಾರ ಖಂಡಿತ ಅಕ್ಷಮ್ಯ ಅಪರಾಧವಾಗಿದೆ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಮಂಜೂರಾದ ಹಾಲಿನ ಮೆಗಾ ಡೈರಿಯನ್ನು ವಿಜಯನಗರ ಜಿಲ್ಲೆಗೆ ಸ್ಥಳಾಂತರ ಆಗುವುದನ್ನು ವಿರೋಧಿಸುತ್ತಿದ್ದು, ಮಂಜೂರಾದ ಜಾಗದಲ್ಲೇ ನಿರ್ಮಾಣವಾಗಬೇಕು. ಮಹಾನಗರ ಪಾಲಿಕೆ ಅಡಿಯಲ್ಲಿ ಬರುವ ಗೃಹ ಬಳಕೆಯ ನೀರಿನ ತೆರಿಗೆಯನ್ನು ಹಿಂಪಡಿಬೇಕು. ಒಳ ಚರಂಡಿ ನಿರ್ವಹಣೆಯ ತೆರಿಗೆಯನ್ನು ಹಿಂಪಡಿಯಬೇಕು ಎಂದು ಆಗ್ರಹಿಸಿದರು.