ಪ್ರವಾಹ ನಿರ್ವಹಣೆಗೆ ಸಿದ್ಧತೆ ಕೈಗೊಳ್ಳಿ

Published on

ಬಳ್ಳಾರಿ ; ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಹರಿಸಲಾಗಿದ್ದು, ನೆರೆ ಪ್ರವಾಹ ನಿರ್ವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಡಿಸಿ ಪ್ರಶಾಂತ ಕುಮಾರ್ ಮಿಶ್ರಾ ಹೇಳಿದರು.

ಇಲ್ಲಿನ ಡಿಸಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ವಿಡಿಯೋ ಸಂವಾದ ಮೂಲಕ ಮಾತನಾಡಿದರು. ಈ ಬಾರಿ ಕೇವಲ 80 ರಿಂದ 85 ಟಿಎಂಸಿ ನೀರನ್ನು ಉಳಿಸಿಕೊಳ್ಳಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದ್ದೆ. ಹಾಗಾಗಿ ಪ್ರವಾಹಕ್ಕೀಡಾಗುವ ನದಿ ಪಾತ್ರದ ಗ್ರಾಮಗಳನ್ನು ಸುರಕ್ಷಿತ ಸ್ಥಳದೆಡೆಗೆ ಸ್ಥಳಾಂತರಿಸಬೇಕು ಎಂದರು.

ಪ್ರವಾಹ ಕುರಿತಾಗಿ ನಿತ್ಯ ಆಯಾ ತಾಲೂಕು ತಹಶೀಲ್ದಾರರು ಪರಿಶೀಲನೆ ನಡೆಸುತ್ತಿರಬೇಕು. ನದಿಪಾತ್ರದ ಜನರಿಗೆ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಬೇಕು. ಜನ-ಜಾನುವಾರು ಬಗ್ಗೆ ಎಚ್ಚರವಹಿಸಬೇಕು. ಜೀವಹಾನಿ, ಬೆಳೆಹಾನಿಯಾಗದಂತೆ ಆಯಾ ಸೂಕ್ತ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಈಗಾಗಲೇ ತಾಲೂಕುವಾರು ಮಳೆ ಕೊರತೆಯಾಗಿರುವ ಕುರಿತು ಆಯಾ ತಹಶೀಲ್ದಾರರು ಕ್ಷೇತ್ರ ಭೇಟಿ ನಡೆಸಿ ಮಾಹಿತಿ ಸಂಗ್ರಹಿಸಿ ಕೃಷಿ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಪರಮೇಶ್ ಮಾತನಾಡಿ, ಜಲಾಶಯದಿಂದ 1 ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ನದಿಗೆ ಹರಿಸಿದಾಗ ಮಾತ್ರ ಕಂಪ್ಲಿ ಮತ್ತು ಗಂಗಾವತಿ ಸೇತುವೆ ಮುಳುಗಡೆಯಾಗಲಿದೆ ಮತ್ತು ಕಂಪ್ಲಿ ಭಾಗದ 2 ಗ್ರಾಮ ಮತ್ತು ಸಿರಗುಪ್ಪ ಭಾಗದ 1 ಗ್ರಾಮವು ಪ್ರವಾಹ ಪಿಡೀತವಾಗುತ್ತದೆ. ಈಗಾಗಲೇ ಸುರಕ್ಷತೆಗಾಗಿ ಕಾಳಜಿ ಕೇಂದ್ರಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.

ಮಾತನಾಡಿ, ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಶೇ. 49 ರಷ್ಟು ಮಳೆ ಕೊರತೆಯಾಗಿದೆ. ಅದೇ ರೀತಿಯಾಗಿ ಜುಲೈ ತಿಂಗಳಲ್ಲಿ ಶೇ. 9.6 ರಷ್ಟು ಮಳೆ ಸುರಿದಿದ್ದು, ಶೇ. 45 ರಷ್ಟು ಮಳೆ ಕೊರತೆಯಾಗಿದೆ. ಹವಮಾನ ಇಲಾಖೆಯ ವರದಿಯನ್ವಯ ಮುಂದಿನ ದಿನಗಳಲ್ಲಿ ಮಳೆಯಾಗುವ ಸಂಭವವಿದೆ. ಜಿಲ್ಲೆಯಲ್ಲಿ ಈಗಾಗಲೇ ಹತ್ತಿ, ಮುಸುಕಿನ ಜೋಳ, ತೊಗರಿ ಬೆಳೆಗಳು ಬಿತ್ತನೆಯಾಗಿದ್ದು, ಖಾರೀಫ್ ಬೆಳೆಗಳ ಬಿತ್ತನೆಗೆ ಇನ್ನೂ ಅವಕಾಶವಿದೆ ಎಂದರು.

ಬಳಿಕ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಡಿ ಜಿಲ್ಲೆಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಡಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net