ಪ್ರಸವಪೂರ್ವ ಲಿಂಗ ಪತ್ತೆ ಮಹಾ ಅಪರಾಧ

Published on

ಬಳ್ಳಾರಿ : ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಮಾಡುವುದು ಮಹಾಅಪರಾಧ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ನಗರದ ನೂತನ ಡಿಸಿ ಕಚೇರಿಯ ಸಭಾಂಗಣದಲ್ಲಿ ಪಿಸಿ, ಪಿಎನ್‌ಡಿಟಿ ಕಾಯ್ದೆ ಮತ್ತು ಕೆಪಿಎಂಇ ಕುರಿತು ಶುಕ್ರವಾರ ನಡೆದ ಜಿಲ್ಲಾಮಟ್ಟದ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಅಲ್ಟ್ರಾ ಸೌಂಡ್ ಸ್ಕಾೃನಿಂಗ್ ಕೇಂದ್ರಗಳಲ್ಲಿ ಪ್ರತಿ ಪ್ರಕರಣದ ಮಾಹಿತಿಯನ್ನು ರಿಜಿಸ್ಟರ್‌ನಲ್ಲಿ ನಮೂದಿಸಬೇಕು. ಆಯಾ ದಿನದ ವರದಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು. ಈ ಕಾರ್ಯ ಮಾಡದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು. ಮಹಿಳೆಯರ ಸಂಖ್ಯೆ ಕಡಿಮೆಯಾಗಲು ಪ್ರಮುಖ ಕಾರಣವಾಗಿರುವ ಹೆಣ್ಣುಭ್ರೂಣ ಹತ್ಯೆ ತಡೆಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಎಸ್ಪಿ ಡಾ. ವಿ.ಜೆ. ಶೋಭಾರಾಣಿ ಮಾತನಾಡಿ, ಸ್ಕಾೃನಿಂಗ್ ಕೈಗೊಳ್ಳುವ ಕೇಂದ್ರಗಳಲ್ಲಿ ವರದಿ ನೀಡುವಾಗ ಗರ್ಭದಲ್ಲಿನ ಮಗುವಿನ ಆರೋಗ್ಯದ ಸ್ಥಿತಿ-ಗತಿ ಕುರಿತು ಪೋಷಕರಿಗೆ ಸತ್ಯತೆಯನ್ನು ಮನವರಿಕೆ ಮಾಡಬೇಕು. ಇತ್ತೀಚೆಗೆ ಜಿಲ್ಲೆಯಲ್ಲಿ ಗರ್ಭದಲ್ಲಿ ಮಗುವಿನ ದೈಹಿಕ ವೈಫಲ್ಯತೆಯಿಂದ ಕೂಡಿರುವುದನ್ನು ಸ್ಕಾೃನಿಂಗ್ ಸೆಂಟರ್‌ನವರು ತಪ್ಪು ಮಾಹಿತಿ ನೀಡಿದ್ದು, ಆ ಮಗುವಿನ ಜನನ ಅತ್ಯಂತ ಕಷ್ಟಕರವಾಗಿದೆ. ಇಂತಹ ವರದಿ ಮರುಕಳಿಸಬಾರದು ಎಂದರು.

ಡಿಎಚ್‌ಒ ಡಾ. ವೈ. ರಮೇಶಬಾಬು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ ಮಾತನಾಡಿದರು.

ಲಿಂಗಾನುಪಾತದಲ್ಲಿ ಏರಿಳಿಕೆ: ಜಿಲ್ಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಲಿಂಗಾನುಪಾತದಲ್ಲಿ ಏರಿಳಿಕೆ ಕಂಡುಬಅದಿದೆ. 2014-15 ರಲ್ಲಿ ಒಂದು ಸಾವಿರ ಗಂಡು ಮಗು ಜನನಕ್ಕೆ 945 ಹೆಣ್ಣು ಮಗು ಜನನ ದಾಖಲಾಗಿದೆ.

2015-16 ರಲ್ಲಿ 936, 2016-17 ರಲ್ಲಿ 925, 2017-18 ರಲ್ಲಿ 934, 2018-19 ರಲ್ಲಿ 953, 2019-20 ರಲ್ಲಿ 941, 2020-21ರಲ್ಲಿ 950, 2021-22 ರಲ್ಲಿ 924, 2022-23 ರಲ್ಲಿ 927 ಮತ್ತು 2023-24 ರಲ್ಲಿ 935 ದಾಖಲಾಗುವ ಮೂಲಕ ಲಿಂಗಾನುಪಾತ ಏರಿಳಿಕೆ ಕಂಡಿದೆ.

ಬಾಕ್ಸ್ : ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿದ್ದ ಎಂ.ಬಿ.ರಾಜಾನಿಸಾಬ್, ಶ್ರೀಧರ್ ಹಾಲಹರವಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಿ ವೃತ್ತಿ ನಡೆಸದಂತೆ ಖಡಕ್ ಸೂಚಿಸಿದ್ದಾರೆ. ಇಲ್ಲಿನ ಬಿಮ್ಸ್ ಆಸ್ಪತ್ರೆಯ ಸುತ್ತ-ಮುತ್ತಲಿನ ಕೆಲ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದ ಅರ್ಜಿಗಳನ್ನು ಡಿಸಿ ರದ್ದುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net