ಬಳ್ಳಾರಿ : ಚೊಚ್ಚಲ ಅಥವಾ ಗಂಡಾಂತರ ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರ ತಪಾಸಣೆಗೆ ಒಳಪಟ್ಟು ತಾಯಿ ಕಾರ್ಡ್ ಪಡೆದುಕೊಳ್ಳಬೇಕು ಎಂದು ಡಿಎಚ್‌ಒ ಡಾ.ವೈ. ರಮೇಶ್‌ಬಾಬು ಹೇಳಿದರು.
ತಾಲೂಕಿನ ವೈ.ಕಗ್ಗಲ್ ಗ್ರಾಮದಲ್ಲಿ ಆಯುಷ್ಮಾನ ಆರೋಗ್ಯ ಮಂದಿರಕ್ಕೆ ಭೇಟಿ ನೀಡಿ ಗರ್ಭೀಣಿಯರ ಆರೋಗ್ಯ ವಿಚಾರಿಸಿ ಪಾಲಕರೊಂದಿಗೆ ಮಾತನಾಡಿದರು. ಮನೆಯಲ್ಲಿ ಮಗಳಾಗಲಿ ಅಥವಾ ಸೊಸೆಯಾಗಲಿ ಗರ್ಭಿಣಿಯೆಂದು ತಿಳಿದ ದಿನದಿಂದಲೇ ನಿರಂತರವಾಗಿ ವೈದ್ಯರಿಂದ ಮಾಡಿಸಬೇಕಾದ ತಪಾಸಣೆ ಹಾಗೂ ಅಗತ್ಯ ಚಿಕಿತ್ಸೆ ನೀಡುವ ಅವಶ್ಯಕತೆ ಇದ್ದಲ್ಲಿ ಕುಟುಂಬದ ಸದಸ್ಯರು ವೈಯಕ್ತಿಕ ಕೆಲಸಗಳ ಕಾರಣದಿಂದ ತಡ ಮಾಡಬಾರದು. ಗರ್ಭಿಣಿಯರ ಆರೋಗ್ಯ ಸುರಕ್ಷತೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ಗಂಡಾಂತರ ಗರ್ಭಿಣಿಯರು ಎಂದು ಗುರ್ತಿಸಿದ ನಂತರ ವೈದ್ಯರ ಸೂಚನೆಯಂತೆ ನಿರಂತರ ನಿಗಾವಣೆ, ರಕ್ತದೊತ್ತಡ ಪರೀಕ್ಷೆ ಕೈಗೊಂಡ ನಂತರ ಕಂಡುಬರುವ ವ್ಯತ್ಯಾಸ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರಿಶೀಲಿಸಿ ಅಗತ್ಯವೆನಿಸಿದಲ್ಲಿ ತಜ್ಞ ವೈದ್ಯರ ಬಳಿ ತಕ್ಷಣವೇ ತೆರಳಬೇಕು ಎಂದರು.
ಅತಿ ಮುಖ್ಯವಾಗಿ ಗರ್ಭಿಣಿಗೆ ಮೇಲ್ಮಟ್ಟದ ಆಸ್ಪತ್ರೆಗೆ ಶಿಫಾರಸ್ಸು ಮಾಡುವಾಗ 108 ಆರೋಗ್ಯ ಕವಚ ಬರುವ ಸಮಯ ತಡವಾಗುವ ಸಾಧ್ಯತೆ ಇದ್ದಲ್ಲಿ ತಕ್ಷಣ ವೈದ್ಯಾಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಬೇಕು. ಹೆರಿಗೆ ವಿಷಯವನ್ನು ಆದ್ಯತೆಯಾಗಿಟ್ಟುಕೊಂಡು ಸ್ಥಳೀಯ ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಸಮನ್ವಯ ಸಭೆ ಕೈಗೊಂಡು ತಮ್ಮ ವ್ಯಾಪ್ತಿಯ ಗರ್ಭಿಣಿಯರ ಆರೈಕೆ ಕುರಿತು ನಿಗಾವಹಿಸಲು ಕ್ರಮವಹಿಸಿ ಎಂದು ತಿಳಿಸಿದರು.
ಜಿಲ್ಲಾ ಆರ್‌ಸಿಎಚ್ ಡಾ.ಹನುಮಂತಪ್ಪ ಮಾತನಾಡಿ, ಹಬ್ಬ, ಜಾತ್ರೆ, ಊರ ದೇವರ ಪಜೆ ಮುಂತಾದ ಆಚರಣೆಯ ಮಾಡುವಾಗ ಗರ್ಭಿಣಿಯ ಸಕಾಲದಲ್ಲಿ ಆಗಬೇಕಾದ ತಪಾಸಣೆಗೆ ಅಡಚಣೆಯಾಗದಂತೆ ಪಾಲಕರು ಮೊದಲು ಆದ್ಯತೆ ನೀಡಬೇಕು. ವೈದ್ಯಾಧಿಕಾರಿಗಳು ತಮ್ಮ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗಂಡಾಂತರ ಗರ್ಭಿಣಿಯರ ಮನೆ ಭೇಟಿ ಹಾಗೂ ಆರೋಗ್ಯದ ಸ್ಥಿತಿ ಕುರಿತು ಪ್ರತಿ ವಾರ ಚರ್ಚಿಸಬೇಕು ಎಂದು ಹೇಳಿದರು.