ನೀತಿ ವಿಜ್ಞಾನ ಪಠ್ಯ ಅಳವಡಿಕೆ

Published on

ಬಳ್ಳಾರಿ : ಮಕ್ಕಳಲ್ಲಿ ನೈತಿಕ ಶಿಕ್ಷಣ ಕೊರತೆಯಿದ್ದು, ಪ್ರಸ್ತಕ ಸಾಲಿನಿಂದ ವಾರಕ್ಕೆ ಎರಡು ದಿನ ನೀತಿ ವಿಜ್ಞಾನ ಎಂಬ ಪಠ್ಯ ಭೋಧಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಬಿಪಿಎಸ್ ಸಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಪಠ್ಯದಲ್ಲಿ ಅಳವಡಿಸಿದ್ದು ಕಾರ್ಯಗತಗೊಳಿಸುವಂತೆ ಶಿಕ್ಷಕರಿಗೆ ಸೂಚಿಸಲಾಗಿದೆ. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಕಲಿಸುವ ಉದ್ದೇಶ ಹೊಂದಿದೆ.

ರಾಜ್ಯ ಸರ್ಕಾರ ಕಳೆದ ವರ್ಷ ಕಲ್ಯಾಣ ಕರ್ನಾಟಕದಲ್ಲಿ ಜಾರಿಗೊಳಿಸಿದ್ದ ಅಕ್ಷರ ಅವಿಷ್ಕಾರ ಯೋಜನೆಯಿಂದ ಶಿಕ್ಷಣ ಮಟ್ಟ ಸುಧಾರಿಸಿದೆ. ಆ ಯೋಜನೆಯಿಂದ ಕಳೆದ ವರ್ಷ ಮೂಲಭೂತ ಸೌಕರ್ಯಗಳಿಗೆ ಅದ್ಯತೆ ನೀಡಲಾಗಿತ್ತು. ಪ್ರಸ್ತಕ ಸಾಲಿನಲ್ಲಿ ಮಕ್ಕಳ ಕಲಿಕೆಗೆ ಒತ್ತು ನೀಡಲಾಗುವುದು. ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸುವ ಮೂಲಕ ಪರೀಕ್ಷಾ ಪಾವಿತ್ರೃತೆ ಕಾಪಾಡಿದೆ. ಕಳೆದ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆ ಎರಡಲ್ಲಿ 84 ಸಾವಿರ ಮಕ್ಕಳು ಉತ್ತೀರ್ಣರಾಗಿದ್ದು ಶೇ. 8ರಷ್ಟು ಫಲಿತಾಂಶ ಹೆಚ್ಚಿದೆ. ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಒದಗಿಸುವ ್ಮೂಲಕ ಪ್ರತ್ಯೇಕ ತರಗತಿಗಳು ಆಯೋಜಿಸಲು ಅನುಕೂಲ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಫೇಸಲ್ ಹಾಜರಾತಿ ವ್ಯವಸ್ಥೆ ಅನುಷ್ಠಾನ ಮಾಡಲಿದ್ದೇವೆ. ಈಗಾಗಲೇ ಪ್ರಾಯೋಗಿಕವಾಗಿ ಪರೀಕ್ಷಿಸಿದ್ದು ಕೆಲವೊಂದು ಬದಲಾವಣೆಗೊಳಿಸಿ ಜಾರಿಗೊಳಿಸಲಾಗುವುದು. ಒಳ ಮೀಸಲಾತಿ ಬಗ್ಗೆ ನ್ಯಾ. ನಾಗಮೋಹನ್ ದಾಸ್ ಸಮಿತಿ ವರದಿ ನೀಡಿದ ಬಳಿಕ ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅಲ್ಲದೆ, ಅನುದಾನಿತ ಶಾಲೆಗಳಿಗೂ ಸಹ ಶಿಕ್ಷಕರ ನೇಮಕಾತಿ ಮಾಡಲಾಗುವುದು. ರಾಜ್ಯಾದ್ಯಂತ ಶಿಥಿಲಾಗೊಂಡಿದ್ದ ಕೊಠಡಿಗಳನ್ನು ನೆಲಸಮಗೊಳಿಸಿ 700 ಕೋಟಿ ರೂ. ವೆಚ್ಚದಲ್ಲಿ ನೂತನ ಕೊಠಡಿಗಳನ್ನು ನಿರ್ಮಿಸಲಾಗುವುದು. ಸದ್ಯ ಉತ್ತಮವಾಗಿ ಸಾಗುತ್ತಿರುವ ದ್ವಿಭಾಷಾ ಬೋಧನೆಯ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ನಾಲ್ಕು ಸಾವಿರ ಹೆಚ್ಚಳ ಮಾಡಲಾಗುವುದು. 1995 ರ ನಂತರ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಿತ ಶಾಲೆಗಳನ್ನಾಗಿ ಈವರೆಗೆ ಮಾಡಿಲ್ಲ. ಈಗ ಅವುಗಳನ್ನು ಅನುದಾನಿತ ಶಾಲೆಗಳನ್ನಾಗಿ ಪರಿವರ್ತಿಸಲು ಸಿಎಂ ಜತೆ ಚರ್ಚಿಸಲಾಗುವುದು. ಅಜೀಂ ಪ್ರೇಮ್ ಜೀ ಫೌಂಡೇಶನ್ ನಿಂದ ತರಬೇತಿ ಪಡೆದ ಶಿಕ್ಷಕರಿಂದ ಉತ್ತಮ ಭೋಧನೆಗೆ ಕಾರಣವಾಗಿದೆ ಎಂಬುದಾಗಿ ತಿಳಿದಿದೆ. ಆದ್ದರಿಂದ, ಸರ್ಕಾರ ಮನಗಂಡು ಈ ವರ್ಷ ರಾಜ್ಯದ 50 ಸಾವಿರ ಶಿಕ್ಷಕರಿಗೆ ತರಬೇತಿ ನೀಡಲು ಆ ಸಂಸ್ಥೆಗೆ ಮನವಿ ಮಾಡಲಾಗಿದೆ ಎಂದರು. ಗಡಿಭಾಗದ ಕನ್ನಡ ಶಾಲೆಗಳಿಗೆ ಮೂಲ ಸೌಲಭ್ಯಗಳು ಒದಗಿಸಿದ್ದು ಮುಚ್ಚದಂತೆ ತಡೆಯಲು ಯತ್ನಿಸಲಾಗುವುದು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಬಸವರಾಜೇಶ್ವರಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಇದ್ದರು.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net