ಬಳ್ಳಾರಿ : ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳಲ್ಲಿ ಮಕ್ಕಳ ಪ್ರಕರಣಗಳು ಬಂದಲ್ಲಿ ಅತ್ಯಂತ ಸೂಕ್ಷ್ಮತೆಯಿಂದ ನಿರ್ವಹಣೆ ಮಾಡುವ ಮೂಲಕ ಸಂವೇದನಾಶೀಲ ಪೊಲೀಸ್ ಠಾಣೆಗಳಾಗಲಿ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.
ನಗರದ ಎಸ್ಪಿ ಕಚೇರಿಯ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ,ಪೋಲಿಸ್ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಮಕ್ಕಳ ವಿಶೇಷ ಪೊಲೀಸ್ ಘಟಕದ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಮಕ್ಕಳ ವಿಶೇಷ ಪೊಲೀಸ್ ಘಟಕವು ಮಗುವಿನ ಗೌರವಕ್ಕೆ ಧಕ್ಕೆ ಬಾರದಂತೆ ಅವರಿಗೆ ಅವಶ್ಯವಿರುವ ಪಾಲನೆ, ಪೋಷಣೆ, ರಕ್ಷಣೆ ಮತ್ತು ಪುನರ್ವಸತಿ, ಪುನರ್ ಮಿಲನ ಕಾಳಜಿ ಇರುವ ಮಕ್ಕಳ ಸ್ನೇಹಿ ಪೊಲೀಸರನ್ನು ಪ್ರತಿಯೊಂದು ಠಾಣೆಯಲ್ಲಿ ಮಕ್ಕಳ ಕಲ್ಯಾಣಾಧಿಕಾರಿಯನ್ನಾಗಿ ನೇಮಕ ಮಾಡಲಾಗುತ್ತದೆ ಜತೆಗೆ ಇಬ್ಬರಿಗೆ ಸಹಾಯಕರನ್ನಾಗಿ ನೇಮಿಸಲಾಗುತ್ತಿದೆ. ಆದರೆ ಇತ್ತೀಚೆಗೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಮತ್ತು ಸಿರಿಗೆರೆ ಪೊಲೀಸ್ ಠಾಣೆಗಳಲ್ಲಿ ಮಕ್ಕಳ ಪ್ರಕರಣಗಳು ಬಂದಾಗ ಸರಿಯಾದ ರೀತಿಯಲ್ಲಿ ನಡೆದುಕೊಳ್ಳುದಿರುವ ಬಗ್ಗೆ ದೂರುಗಳು ಆಯೋಗಕ್ಕೆ ಬಂದಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ತರಹದ ಪ್ರಮಾದಗಳು ನಡೆಯಬಾರದು ಎಂದು ಕಿವಿಮಾತು ಹೇಳಿದರು.
ಪ್ರತಿ ಗುರುವಾರ ಎಲ್ಲ ಪೋಲಿಸ್ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮಗಳು ಕಡ್ಡಾಯವಾಗಿ ನಡೆಸುವ ಮೂಲಕ ಮಕ್ಕಳಿಗೆ ಮಕ್ಕಳ ಹಕ್ಕುಗಳ ಬಗ್ಗೆ, ಕಾಯ್ದೆ ಕಾನೂನುಗಳ ಮಾಹಿತಿ ನೀಡಬೇಕು ಎಂದು ತಿಳಿಸಿದರು.