ಪೊಲೀಸರ ಸೇವೆ ಅನನ್ಯ

Published on

ಬಳ್ಳಾರಿ : ಸಮಾಜದ ಶಾಂತಿಯ ಬದುಕಿಗೆ ಪೊಲೀಸರ ಸೇವೆ ಅತ್ಯಂತ ಶ್ಲಾಘನೀಯ. ಪೊಲೀಸರು ಕರ್ತವ್ಯದ ಒಂದು ಮಾನವ ಸಂಪನ್ಮೂಲ ಎಂದು ಡಿಸಿ ನಾಗೇಂದ್ರ ಪ್ರಸಾದ್ ಕೆ. ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೊಲೀಸರು ನನಗಿಂತ ನನ್ನ ಕರ್ತವ್ಯ ಮೇಲು ಎಂದು ಭಾವಿಸುತ್ತಾರೆ. ನಾವು ವ್ಯಕ್ತಿಯನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ಅಮೂಲ್ಯ ಜೀವವನ್ನು ಕಳೆದುಕೊಳ್ಳುತ್ತೇವೆ ಎಂದರು.

ದೇಶದ ರಕ್ಷಣೆ ಮತ್ತು ಸಾರ್ವಜನಿಕರ ನೆಮ್ಮದಿಗೆ ಹುತಾತ್ಮರಾದವರ ಬಗ್ಗೆ ಗೌರವ ಭಾವನೆ ಹೊಂದಬೇಕು. ಕೇಂದ್ರ, ರಾಜ್ಯ ಹಾಗೂ ಅರೆಸೇನಾ ಪಡೆಗಳಲ್ಲಿ ದೇಶದ ಆಂತರಿಕ ಭದ್ರತೆ ಸಲುವಾಗಿ ಕರ್ತವ್ಯದಲ್ಲಿ ಹುತಾತ್ಮರಾದವರ ಸೇವೆಗೆ ನಮನ ಸಲ್ಲಿಸಬೇಕು ಎಂದು ಸ್ಮರಿಸಿದರು.

ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಮಾತನಾಡಿ, ಪೊಲೀಸರ ತ್ಯಾಗ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಎಲ್ಲರೂ ಕೈಜೋಡಿಸಬೇಕು. ದೇಶದಲ್ಲಿ 191 ಪೊಲೀಸರು ಮತ್ತು ಕರ್ನಾಟಕದಲ್ಲಿ 8 ಜನ ಪೊಲೀಸರು ಹುತಾತ್ಮರಾಗಿದ್ದರೆ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮುನ್ನ ಆರ್‌ಪಿಎಫ್ ಕಮಾಂಡರ್ ಸಿಕಿಂದರ್ ಅವರು ಪೊಲೀಸ್ ತುಕಡಿಗಳಿಂದ ವಂದನೆ ಸ್ವೀಕರಿಸಿದರು. ನಂತರ ಪಥ ಸಂಚಲನ ಮೂಲಕ ಹುತಾತ್ಮರ ಶಾಂತಿಗಾಗಿ ಗಣ್ಯರು ಪುಷ್ಪ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net