ಬಳ್ಳಾರಿ ; ಇತ್ತೀಚಿನ ದಿನಗಳಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಮಾರಕವಾಗಿದೆ ಎಂದು ಬಿಪಿಎಸ್‌ಸಿ ಸಂಸ್ಥೆಯ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ನಗರದ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಆ್ಯಂಡ್ ಕಾಲೇಜಿನಲ್ಲಿ ವಿಜಯವಾಣಿ ದಿನಪತ್ರಿಕೆ ವತಿಯಿಂದ ಬಿಪಿಎಸ್‌ಸಿ (ಐಸಿಎಸ್‌ಸಿ ಪಠ್ಯಕ್ರಮ) ಸಂಸ್ಥೆ ಸಹಯೋಗದೊಂದಿಗೆ ಐದರಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿಕೊಂಡಿದ್ದ ‘ಪ್ಲಾಸ್ಟಿಕ್ ಮುಕ್ತ ಪರಿಸರ ’ ವಿಷಯದ ಕುರಿತು ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಲ ವರ್ಷಗಳಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ಹಲವು ಕ್ರಮ ವಹಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಆದ್ದರಿಂದ, ಪ್ರತಿಯೊಬ್ಬ ಮಕ್ಕಳು ತಮ್ಮ ಮನೆಯಲ್ಲಿ ಅರಿವು ಮೂಡಿಸಿ ಪ್ಲಾಸ್ಟಿಕ್ ಮುಕ್ತರಾಗಿಸಲು ಸಹಕರಿಸಬೇಕು ಎಂದು ಸಲಹೆ ನೀಡಿದರು.
ಮಣ್ಣಿನಲ್ಲಿ ಪ್ಲಾಸ್ಟಿಕ್ ಕೊಳೆಯದೆ ಉಳಿಯುವುದರಿಂದ ಮಣ್ಣಿನ ಫಲವತ್ತತೆ ಕಳೆದುಕೊಳ್ಳುತ್ತಿದೆ. ಇದರಿಂದ ಅನೇಕ ಹೊಸ ಹೊಸ ರೋಗಗಳು ಉತ್ಪತ್ತಿಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಬಿಪಿಎಸ್‌ಸಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಕೇವಲ ಶೈಕ್ಷಣಿಕ ಒತ್ತು ನೀಡದೆ ಸಾಮಾಜಿಕ ಕಳಕಳಿ ಹೊಂದಿದ್ದು, ಪರಿಸರ ಸಂರಕ್ಷಣೆಯಲ್ಲಿ ದೇಶದಲ್ಲಿ ಉನ್ನತ ಸ್ಥಾನದಲ್ಲಿದೆ. ಈಗಿನ ಮಕ್ಕಳಿಗೆ ಎಐ ಬಗ್ಗೆ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿ ನಿವೃತ್ತ ಪ್ರೊ. ಜಿ.ವೀರೇಶ್ ಮಾತನಾಡಿ, ಈ ಕಾರ್ಯಕ್ರಮ ಪರಿಸರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶವಾಗಿದೆ. ಎಲ್ಲರೂ ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸಲು ಸಹಕರಿಸಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಲು ಎಲ್ಲರೂ ಸಂಕಲ್ಪ ಕೈಗೊಳ್ಳಿ ಎಂದರು.
ಪ್ರಾಂಶುಪಾಲ ಜಿ.ಅನಿಲ್‌ಕುಮಾರ ಮಾತನಾಡಿ, ಶಾಲೆಯಲ್ಲಿ ಮಕ್ಕಳಿಗೆ ಜಂಕ್ ಫುಡ್ ಸೇವನೆ ನಿಷೇಧ ಹಾಗೂ ಪಾಲಕರು ಶಾಲೆಗೆ ಪ್ಲಾಸ್ಟಿಕ್ ಕವರ್‌ನಲ್ಲಿ ತಂದ ಆಹಾರವನ್ನು ಮಕ್ಕಳಿಗೆ ನೀಡದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗುವುದು. ಬಾಲ್ಯದಲ್ಲಿಯೇ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದರು.
ಬಳಿಕ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳನ್ನು ಚಿತ್ರಕಲಾ ಶಿಕ್ಷಕರಾದ ಲೋಕನಾಥ, ದುರ್ಗಾಭವನಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿ ಬಹುಮಾನಕ್ಕ ಅರ್ಹಗೊಂಡ ಚಿತ್ರಗಳನ್ನು ಆಯ್ಕೆ ಮಾಡಿದರು.
ಕೋಟ್... ಪ್ಲಾಸ್ಟಿಕ್‌ನಿಂದ ಪರಿಸದ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿಜಯವಾಣಿ ಪತ್ರಿಕೆ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸಿದೆ. ಪ್ರತಿಯೊಬ್ಬರು ಪರಿಸರ ಕಾಳಜಿ ವಹಿಸದಿದ್ದರೆ ಮುಂದಿನ ಪೀಳಿಗೆ ಸಂಕಷ್ಟ ಎದುರಿಸಲಿದೆ.
- ತಬಸುಮ್, ಪ್ರಥಮ ಸ್ಥಾನ.
ಕೋಟ್... ಇತ್ತೀಚಿನ ದಿನಗಳಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ವಾತವರಣದಲ್ಲಿ ಬದಲಾವಣೆಯಾಗುತ್ತಿದೆ. ವಿಜಯವಾಣಿ ಪತ್ರಿಕೆಯ ಆಯೋಜಿಸಿದ ಇಂತಹ ಒಳ್ಳೆಯ ಕಾರ್ಯಕ್ರಮದಿಂದ ಜನರು ಎಚ್ಚೇತ್ತುಕೊಳ್ಳಬೇಕಿದೆ.
-ಮಹತಿ, ದ್ವಿತೀಯ ಸ್ಥಾನ.
ಕೋಟ್.. ಮಕ್ಕಳಿಗೆ ಪರಿಸರ ಕಾಳಜಿ ಮೂಡಿಸಬೇಕು ಎಂಬ ಸಂಕಲ್ಪ ತೊಟ್ಟಿರುವ ವಿಜಯವಾಣಿ ಪತ್ರಿಕೆಯ ಕಾರ್ಯ ಶ್ಲಾಘನೆ. ಇಂತಹ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರು ಸಹಕರಿಸಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಬೇಕು.
- ಚರಣ್ ವೆಂಕಟೇಶ್, ತೃತೀಯ ಸ್ಥಾನ.
ಬಾಕ್ಸ್ : ವಿಜಯವಾಣಿ ಪತ್ರಿಕೆಯ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯಿತು. ವಿದ್ಯಾರ್ಥಿಗಳು ಎರಡು ದಿನ ಮುನ್ನ ಹಾಗೂ ಕೆಲವರು ಸ್ಥಳದಲ್ಲೇ ನೋಂದಣಿ ಮಾಡಿಕೊಂಡರು. ಚಿತ್ರಕಲಾ ಸ್ಪರ್ಧೆಗೆ ವಿದ್ಯಾರ್ಥಿಗಳು ವಿವಿಧ ಬಣ್ಣಗಳೊಂದಿಗೆ ಹಾಳೆಯ ಮೇಲೆ ಪ್ಲಾಸ್ಟಿಕ್ ಮುಕ್ತ ಪರಿಸರ ಬಗ್ಗೆ ಚಿತ್ರ ಬಿಡಿಸಿ ಕಾಳಜಿ ಮೆರೆದರು. 150ಕ್ಕೂ ಅಧಿಕ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೂಂಡಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ತಬಸುಮ್, ದ್ವಿತೀಯ ಮಹತಿ ಹಾಗೂ ಚರಣ್ ವೆಂಕಟೇಶ್ ತೃತೀಯ ಸ್ಥಾನ ಪಡೆದರು. ಗಣ್ಯರು ವಿಜೇತರಿಗೆ ನಗದು ಬಹುಮಾನ ವಿತರಿಸಿದರು.
ವಿಆರ್‌ಎಲ್ ಸಂಸ್ಥೆ ಬಗ್ಗೆ ಮೆಚ್ಚುಗೆ : ದೇಶದಲ್ಲಿಯೇ ವಿಆರ್‌ಎಲ್ ಸಂಸ್ಥೆ ಉನ್ನತ ಸ್ಥಾನದಲ್ಲಿದೆ. ಸಾಮಾಜಿಕ ಕಳಕಳಿಯಿಂದ ಇಂತಹ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ವಿನೂತನ ಕಾರ್ಯಕ್ರಮ ಆಯೋಜಿಸುವಲ್ಲಿ ವಿಆರ್‌ಎಲ್ ಒಂದು ಹೆಜ್ಜೆ ಮುಂದಿದೆ. ಇನ್ನೂ ಉನ್ನತ ಸ್ಥಾನಕ್ಕೆ ಬೆಳೆಯಲಿ ಎಂದು ಬಿಪಿಎಸ್‌ಸಿ ಸಂಸ್ಥೆಯ ಚೇರ್‌ಮನ್ ಡಾ.ಎಸ್.ಜೆ.ವಿ.ಮಹಿಪಾಲ್ ಆಶಿಸಿದರು.