

ಬಳ್ಳಾರಿ: ರಾಜ್ಯದಲ್ಲಿ ಕರೊನಾದಿಂದ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಸೋಂಕಿತರಿಗೆ ಏ.27ರಿಂದ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಆರಂಭಿಸಲಾಗುವುದು. ಗುಣಮುಖರಾದವರು ರಕ್ತದಾನಕ್ಕೆ ಮುಂದಾಗಬೇಕು ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಲಾಕ್‌ಡೌನ್‌ದಿಂದ ಆಸ್ಪತ್ರೆಗಳಿಗೆ ಹೋಗುವವರಿಗೆ ಸಮಸ್ಯೆಯಾಗುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಸಿಎಂಗೆ ಪತ್ರ ಬರೆದಿದ್ದರು. ಈ ವಿಚಾರ ನನ್ನ ಗಮನಕ್ಕೆ ಬಂದ ಬಳಿಕ ಎಲ್ಲ ಡಿಸಿಗಳೊಂದಿಗೆ ಜತೆ ಚರ್ಚಿಸಿ ಡೆಂಘೆ, ಹೃದಯ ಸಮಸ್ಯೆ ಇರುವವರಿಗೆ ಪಾಸ್ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೇನೆ. ಮೈಸೂರು ಜಿಲ್ಲೆಯ ಜ್ಯೂಬಿಲಿಯೆಂಟ್ ಕಾರ್ಖಾನೆ ನೌಕರನಿಗೆ ಕರೊನಾ ಪಾಸಿಟಿವ್ ಬಂದಿರುವ ಮೂಲ ಇನ್ನೂ ತಿಳಿದಿಲ್ಲ. ಈ ವಿಚಾರವನ್ನು ಪ್ರಧಾನಿ ಗಮನಕ್ಕೆ ತರುವುದಾಗಿ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ತಿಳಿಸಿದರು.
ಮತ್ತಿಬ್ಬರು ಡಿಸ್ಚಾರ್ಜ್
ಬಳ್ಳಾರಿ: ಜಿಲ್ಲೆಯಲ್ಲಿ ಕರೊನಾದಿಂದ ಸೋಂಕಿನಿಂದ ಗುಣಮುಖರಾದ ಇಬ್ಬರನ್ನು ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಹೊಸಪೇಟೆಯ ಪಿ-90 ಮತ್ತು ಬಳ್ಳಾರಿಯ ಗುಗ್ಗರಹಟ್ಟಿಯ ಪಿ-151 ರೋಗಿ ಗುಣಮುಖರಾದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಯಿತು. ಒಟ್ಟು 13 ಪಾಸಿಟಿವ್ ಪ್ರಕರಣಗಳ ಪೈಕಿ ಇತ್ತೀಚೆಗಷ್ಟೆ ಮೂವರು ಗುಣಮುಖರಾಗಿದ್ದರು. ಇದರ ಬೆನ್ನಲ್ಲೆ ಮತ್ತಿಬ್ಬರು ಬಿಡುಗಡೆ ಆಗಿದ್ದು, ಉಳಿದ ಎಂಟು ರೋಗಿಗಳು ಕೂಡ ಗುಣಮುಖ ಆಗುತ್ತಿರುವ ಮಾಹಿತಿಯಿದೆ. ಹಾಟ್‌ಸ್ಪಾಟ್ ನಗರವಾಗಿದ್ದ ಹೊಸಪೇಟೆಯ 11 ರೋಗಿಗಳ ಪೈಕಿ ಒಟ್ಟು ನಾಲ್ವರು ಗುಣಮುಖರಾಗಿದ್ದಾರೆ.
ಪತ್ರಕರ್ತರು ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, ನಾನಾ ಕಡೆ ಪತ್ರಕರ್ತರ ಮೇಲೆ ಹಲ್ಲೆಯಾಗುತ್ತಿವೆ. ಪತ್ರಕರ್ತರು ಹಾಗೂ ಅವರ ಕುಟುಂಬದ ರಕ್ಷಣೆ ಸರ್ಕಾರದ ಹೊಣೆ. ಮಂಡ್ಯದ ಎಂಎಲ್ಸಿ ಶ್ರೀಕಂಠೇಗೌಡ ಅನುಭವಿ ರಾಜಕಾರಣಿಯಾಗಿದ್ದು, ಬೀದಿಗಿಳಿದು ಜಗಳ ಮಾಡಿದ್ದು ಖಂಡನೀಯ.| ಶ್ರೀರಾಮುಲು ಆರೋಗ್ಯ ಸಚಿವ