ಬಳ್ಳಾರಿ, ಪ್ರತಿ ಭಾನುವಾರ ಪಾರಿವಾಳ ಪಂದ್ಯದ ಬೆಟ್ಟಿಂಗ್

Published on

ಬಳ್ಳಾರಿ : ದೇಶದಲ್ಲಿ ದಿನೇದಿನೆ ಐಪಿಎಲ್ ಬೆಟ್ಟಿಂಗ್ ಹೆಚ್ಚುತ್ತಿರುವಂತೆ, ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ಭಾನುವಾರ ಪಾರಿವಾಳ ಪಂದ್ಯದ ಬೆಟ್ಟಿಂಗ್ ಜೋರಾಗಿದೆ.

ಇಲ್ಲಿನ ಮಿಲ್ಲರಪೇಟೆ, ಎಸ್‌ಎನ್ ಪೇಟೆ, ರೇಡಿಯೊ ಪಾರ್ಕ್, ಬಂಡಿಹಟ್ಟಿ, ಹುಸೇನ್ ನಗರ ಹಾಗೂ ಸೇರಿದಂತೆ ವಿವಿಧಡೆ ಪ್ರತಿ ಭಾನುವಾರ ಮಧ್ಯಾಹ್ನದ ವೇಳೆ ನೂರರು ಯುವಕರು ಸೇರಿ ಪಾರಿವಾಳ ಪಂದ್ಯದಲ್ಲಿ ತೊಡಗಿ ವಾರದಿಂದ ದಿನಗೂಲಿ ದುಡಿದ ಹಣವನ್ನು ಬೆಟ್ಟಿಂಗ್‌ನಲ್ಲಿ ಹಾಕಿ ಲಕ್ಷಾಂತರ ರೂ. ಹಣ ಕಳೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣಾಧಿಕಾರಿಗಳ ಗಮನಕ್ಕೆ ಇದ್ದರೂ ಕಾಟಾಚಾರಕ್ಕೆ ದಾಳಿ ನಡೆಸುವುದು ಸಾಮಾನ್ಯವಾಗಿದೆ.

ಯಾವ ತರಹ ಬೆಟ್ಟಿಂಗ್ : ವಾರದ ಪ್ರತಿ ಭಾನುವಾರ ಮಧ್ಯಾಹ್ನದೊಂದು ಇಲ್ಲಿನ ಸ್ಥಳೀಯ ಎರಡು ಯುವಕರ ಗುಂಪು ನಗರದ ಹೊರವಲಯದಲ್ಲಿ ಸೇರಿ ಎರಡು ಪಾರಿವಾಳಗಳನ್ನು ಮೇಲೆ ಹಾರಲು ಬಿಡುತ್ತಾರೆ. ಹಾರಿದ ಆ ಎರಡು ಪಾರಿವಾಳಗಳು ಅವು ಎಲ್ಲಿ ವಾಸವಿದ್ದ ಆ ಪ್ರದೇಶಕ್ಕೆ ಬಂದು ತಲುಪಲಿವೆ. ಅಲ್ಲಿಂದ ಎರಡು ಗುಂಪಿನ ಕೆಲವರು ಸುಮಾರು ಮೂರ‌್ನಾಲ್ಕು ಕಿ.ಮೀ. ವರೆಗೆ ಕೈ ಅಥವಾ ಬಾಯಲ್ಲಿ ಟವಲ್ ಹಿಡಿದುಕೊಂಡು ಒಂದು ಗೆರೆ ಹಾಕಿರುವ ಪ್ರದೇಶಕ್ಕೆ ಯಾರು ಮೊದಲು ಸೇರುತ್ತಾರೆ ಅವರು ವಿಜೇತರಾಗಲಿದ್ದಾರೆ. ಯುವಕರು ಓಡುವ ರಸ್ತೆಯಲ್ಲಿ ಬೆಟ್ಟಿಂಗ್‌ನಲ್ಲಿ ತೊಡಗಿದ ಹಲವು ಯುವಕರು ಬೈಕ್‌ನಲ್ಲಿ ಚಲಾಯಿಸಿಕೊಂಡು ಮೂಲಕ ಅವರನ್ನು ಹುರಿದುಂಬಿಸುತ್ತಾರೆ. ಒಂದು ವಾರಕ್ಕೆ ನಾಲ್ಕೈದು ಕಡೆ ಪಾರಿವಾಳ ಪಂದ್ಯ ನಡೆಯುವುದರಿಂದ ಪ್ರತಿ ವಾರ ಅಂದಾಜು ಹತ್ತು ಲಕ್ಷ ರೂ. ಬೆಟ್ಟಿಂಗ್ ನಡೆಯಲಿದೆ. ತಿಂಗಳಿಗೆ ಕೋಟಿ ರೂ. ಪಾರಿವಾಳ ಬೆಟ್ಟಿಂಗ್ ನಡೆಯಲಿದೆ. ಕೆಲವೊಂದು ಬಾರಿ ಪೊಲೀಸರು ದಾಳಿ ನಡೆಸಿ ನಾಲ್ಕೈದು ಯುವಕರನ್ನು ಬಂಧಿಸಿದ್ದಾರೆ. ಆದರೆ, ಯಾವುದೇ ಪ್ರಕರಣ ದಾಖಲಿಸದೆ ಬಿಡುಗಡೆಗೊಳಿಸಿದರು ಎಂದು ಬಂಡಿಹಟ್ಟಿ ಪ್ರದೇಶದ ಯುವಕ ತಿಳಿಸಿದರು.

ಬಹುತೇಕ ಪಾರಿವಾಳ ಪೆಟ್ಟಿಗೆಗಳು : ಇಲ್ಲಿನ ನಗರದ ಸ್ಲಂ ಹಾಗೂ ವಿವಿಧ ಪ್ರದೇಶಗಳಲ್ಲಿ ಹತ್ತಾರು ಯುವಕರು ಸೇರಿ ಇಪ್ಪತ್ತರಿಂದ ಮೂವತ್ತು ಪಾರಿವಾಳಗಳನ್ನು ಸಾಕುತ್ತಾರೆ. ಅಲ್ಲದೆ, ಪ್ರತಿ ಭಾನುವಾರ ಪಂದ್ಯ ಆಡುವ ಪಾರಿವಾಳಕ್ಕೆ ಪ್ರತ್ಯೇಕವಾಗಿ ಪೋಷಿಸಿ ಅದಕ್ಕೆ ತರಬೇತಿ ನೀಡಲಿದ್ದಾರೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ಆ ಪಾರಿವಾಳವನ್ನು ಹೊರವಲಯದಲ್ಲಿ ಹಾರಲು ಬಿಟ್ಟು ವಾಸವಿರುವ ಪ್ರದೇಶಕ್ಕೆ ಎಷ್ಟು ನಿಮಿಷಕ್ಕೆ ತಲುಪಲಿದೆ ಸಮಯ ಕೂಡ ತಾಳೆ ಹಾಕಲಿದ್ದಾರೆ. ಇದರಿಂದ, ವಾರದ ಆರು ದಿನಗಳು ತರಬೇತಿ ನೀಡಿದ್ದ ಪಾರಿವಾಳವನ್ನು ಭಾನುವಾರ ಪಂದ್ಯದಲ್ಲಿ ಆಡಿಸುತ್ತಾರೆ. ಒಟ್ಟಾರೆ, ನಗರದ ವಿವಿಧ ಪ್ರದೇಶಗಳಲ್ಲಿ ಪೊಲೀಸರು ಸೂಕ್ತ ರೀತಿಯಲ್ಲಿ ದಾಳಿ ನಡೆಸಿದರೆ ಕನಿಷ್ಠ ಪ್ರತಿ ನಗರಕ್ಕೆ ಮೂರ‌್ನಾಲ್ಕು ಪಾರಿವಾಳ ಸಾಕುವ ಪೆಟ್ಟಿಗೆಗಳು ದೊರೆಯಲಿವೆ ಎಂಬುದು ಸ್ಪಷ್ಟ ಮಾಹಿತಿಯಿದೆ.

ಹಳ್ಳಿಗೂ ವಿಸ್ತರಣೆ : ಕಳೆದ ಕೆಲ ವರ್ಷಗಳಿಂದ ಕೇವಲ ನಗರಕ್ಕೆ ಮಾತ್ರ ಸೀಮಿತವಾಗಿದ್ದ ಪಾರಿವಾಳ ಪಂದ್ಯವು ಇತ್ತೀಚೆಗೆ ಗ್ರಾಮೀಣ ಪ್ರದೇಶಕ್ಕೂ ಹರಡಿದೆ. ಜಿಲ್ಲೆಯ ಗ್ರಾಮೀಣ, ಸಿರಗುಪ್ಪ, ಕುರುಗೋಡು ತಾಲೂಕು ಸೇರಿದಂತೆ ವಿವಿಧ ಗ್ರಾಮಗಳ ಮನೆಯ ಮಹಡಿ ಮೇಲೆ ಯುವಕರು ಪಾರಿವಾಳಗಳನ್ನು ಸಾಕುವುದು ಅಭ್ಯಾಸವಾಗಿದೆ. ಅಲ್ಲದೆ, ಹಳ್ಳಿ, ಹಳ್ಳಿಗಳ ನಡುವೆ ಪಂದ್ಯ ಏರ್ಪಾಡಿಸಿ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಹೆಚ್ಚು ಹಳ್ಳಿಗಳಲ್ಲಿ ವಿದ್ಯಾವಂತರೆ ತೊಡಗಿರುವುದು ಪಾಲಕರಿಗೆ ತಲೆ ನೋವುಯಾಗಿ ಪರಿಣಮಿಸಿದೆ. ಮಕ್ಕಳನ್ನು ಪಾರಿವಾಳ ಪಂದ್ಯದಲ್ಲಿ ತೊಡಗದಂತೆ ಕ್ರಮವಹಿಸಲು ಪಾಲಕರು ಮುಂದಾದರೆ ಮನೆ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇಷ್ಟು ಪ್ರಮಾಣದಲ್ಲಿ ಪಾರಿವಾಳ ಪಂದ್ಯದ ಬೆಟ್ಟಿಂಗ್ ನಡೆಯುತ್ತಿದ್ದರೂ ಈವರೆಗೂ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಒಂದು ಪ್ರಕರಣ ದಾಖಲಾಗದೆ ಇರುವುದು ಆಶ್ಚರ್ಯ ಮೂಡಿಸಿದೆ.

ಕೋಟ್... ನಗರ ಹಾಗೂ ಜಿಲ್ಲೆಯಲ್ಲಿ ಪಾರಿವಾಳ ಪಂದ್ಯ ನಡೆಯುವುದು ಈವರೆಗೂ ಗಮನಕ್ಕೆ ಬಂದಿಲ್ಲ. ಇಂತಿಷ್ಟು ಸ್ಥಳದಲ್ಲಿ ನಡೆಯಲಿದೆ ಎಂಬ ಮಾಹಿತಿ ತಿಳಿದರೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗುವುದು.

- ಡಾ.ವಿ.ಜೆ.ಶೋಭಾರಾಣಿ, ಎಸ್ಪಿ, ಬಳ್ಳಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net