ಕ್ರೀಡೆಯಿಂದ ದೈಹಿಕ-ಮಾನಸಿಕ ವೃದ್ಧಿ

Published on

ಬಳ್ಳಾರಿ : ದೈನಂದಿನ ಜೀವನದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೊಳ್ಳುತ್ತದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಮೂರು ದಿನಗಳವರೆಗೆ ನಡೆಯುತುವ ವಾರ್ಷಿಕ ಕ್ರೀಡಾಕೂಟಗಳಿಗೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದರು. ಕ್ರೀಡೆ ಎಂಬುದು ಕೇವಲ ಆಟದ ಸಂದರ್ಭವಲ್ಲದೇ, ತಂಡ ನಿರ್ವಹಣೆ, ಪರಿಶ್ರಮ ಹಾಗೂ ಶಿಸ್ತಿನ ಕ್ರಮವಾಗಿದೆ. ಪ್ರತಿನಿತ್ಯ 30 ರಿಂದ 40 ನಿಮಿಷಗಳ ಕಾಲ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯು ಉತ್ತಮ ಆರೋಗ್ಯ ರೂಪಿಸಿಕೊಳ್ಳುವ ಪ್ರಮುಖ ಆಯಾಮವಾಗಿದೆ ಎಂದರು.

ಪ್ರತಿವರ್ಷದಂತೆ ಈ ವರ್ಷವೂ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಕ್ರೀಡಾಕೂಟ ಆಯೋಜನೆ ಮಾಡಿರುವುದು ಸಂತಸ ತಂದಿದೆ. ಪ್ರತಿಯೊಬ್ಬರೂ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಪೊಲೀಸ್ ಅಧಿಕಾರಿಗಳು ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಹಗಲು-ಇರುಳು ಎನ್ನದೇ ಕರ್ತವ್ಯನಿರತರಾಗಿರುತ್ತಾರೆ. ತಮ್ಮ ಕೆಲಸಗಳ ಒತ್ತಡವನ್ನು ನಿಗ್ರಹಿಸಿಕೊಳ್ಳಲು ಕ್ರೀಡಾಕೂಟಗಳು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ಕ್ರೀಡಾಪಟುವು ಕ್ರೀಡೆಯಲ್ಲಿ ತಮ್ಮ ಎಲ್ಲ ಮಾನಸಿಕ ಒತ್ತಡಗಳನ್ನು ಮರೆತು, ವಿವಿಧ ಆಟಗಳಲ್ಲಿ ಮಜ್ಞರಾಗಿ ಪಾಲ್ಗೊಳ್ಳುವ ಮೂಲಕ ಕ್ರೀಡೆಗಳಲ್ಲಿ ಉತ್ಸುಕತೆಯಿಂದ ಭಾಗವಹಿಸಬೇಕು ಎಂದರು.

ವಿವಿಧ ತಂಡ : ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕವಾಗಿ ಕ್ರಿಕೆಟ್, ವಾಲಿಬಾಲ್, ಕಬ್ಬಡ್ಡಿ, ಟೇಬಲ್ ಟೆನ್ನಿಸ್, ಓಟ, ಉದ್ದ ಜಿಗಿತ, ಎತ್ತರ ಜಿಗಿತ, ಹಗ್ಗ ಜಗ್ಗಾಟ ಹಾಗೂ ಗುಂಡು ಹಾರಿಸುವ (ಫೈರಿಂಗ್) ಕ್ರೀಡೆಗಳನ್ನು ಆಯೋಜಿಸಿದ್ದು, ತುಂಗಾ ಡಿಎಆರ್ , ಬಳ್ಳಾರಿ ಕೋಟೆ, ದುರ್ಗಾ ಮಹಿಳಾ, ವೇದಾವತಿ ಸಿರುಗುಪ್ಪ ತಂಡ, ಸ್ಕಂದಗಿರಿ ತೋರಣಗಲ್ಲು ತಂಡ, ಸಂಸ್ಕೃತಿ ಲಿಪಿಕ ಸಿಬ್ಬಂದಿ ವರ್ಗ ತಂಡ ಸೇರಿ ಆರು ತಂಡಗಳಿಂದ 120ಕ್ಕೂ ಹೆಚ್ಚಿನ ಕ್ರೀಡಾಪಟುಗಳು ಭಾಗವಹಿಸಿದ್ದರು.

ಆಕರ್ಷಕ ಪಥ ಸಂಚಲನ : ಆರು ತಂಡಗಳ ಬಾವುಟಗಳೊಂದಿಗೆ ಕ್ರೀಡಾಪಟುಗಳ ಪಥ ಸಂಚಲನವು ಆಕರ್ಷಕವಾಗಿತ್ತು ಹಾಗೂ ಕ್ರೀಡಾಜ್ಯೋತಿಯೊಂದಿಗೆ ಮೈದಾನದಲ್ಲಿ ಸಂಚರಿಸಿ, ವೇದಿಕೆಯ ಮುಂಭಾಗ ತಲುಪಿ ನಿರ್ಗಮನಗೊಂಡಿತು. ಇದೇ ವೇಳೆ ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net