ಸುರಕ್ಷಿತ ಅಂತರ್ಜಾಲ ಬಳಕೆಗೆ ಅದ್ಯತೆವಹಿಸಿ

Published on

ಬಳ್ಳಾರಿ ; ವಿವಿಧ ಕಚೇರಿಯಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಸೇರಿದಂತೆ ಪ್ರತಿಯೊಬ್ಬರೂ ಸುರಕ್ಷಿತ, ನೈತಿಕ ಮತ್ತು ಜವಾಬ್ದಾರಿಯುತ ಇಂಟರ್ನೆಟ್ ಬಳಕೆ ಮಾಡಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ರಾಷ್ಟೀಯ ಸೂಚನಾ ವಿಜ್ಞಾನ ಕೇಂದ್ರ (ಎನ್‌ಐಸಿ) ಹಾಗೂ ಪೊಲೀಸ್ ಇಲಾಖೆ (ಸೈಬರ್ ಸೆಲ್) ಸಹಯೋಗದೊಂದಿಗೆ ಸುರಕ್ಷಿತ ಅಂತರ್ಜಾಲ ದಿನಾಚರಣೆ ಅಂಗವಾಗಿ ಅಂತರ್ಜಾಲ ಜಾಗೃತಿ ಕುರಿತು ಅಧಿಕಾರಿ ಮತ್ತು ಸಿಬ್ಬಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಡಿಜಿಟಲ್ ಜಗತ್ತು ಅಭಿವೃದ್ಧಿ ಹೊಂದುತ್ತಿದ್ದಂತೆ ಜನರು, ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರು, ಇಂಟರ್ನೆಟ್ ಅನ್ನು ಸುರಕ್ಷಿತವಾಗಿ ಬಳಸಬೇಕು. ಒಳ್ಳೆಯ ಉದ್ದೇಶಕ್ಕಾಗಿ ಅಗತ್ಯವಾದ ಮಾಹಿತಿ ಹೊಂದಲು ಆದ್ಯತೆ ನೀಡಬೇಕು ಎಂದರು.

ಶಿಕ್ಷಣ, ಸಾಮಾಜಿಕ ಸಂವಹನ ಮತ್ತು ವ್ಯವಹಾರಕ್ಕೆ ಹಲವಾರು ಅವಕಾಶಗಳನ್ನು ಇಂಟರ್ನೆಟ್ ಒದಗಿಸಿದೆ. ಇದು ಪ್ರಪಂಚದಾದ್ಯಂತ ಜನರನ್ನು ಒಂದುಗೂಡಿಸುವ ಪ್ರಬಲ ಸಾಧನವಾಗಿದೆ. ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಎಷ್ಟು ಉಪಯುಕ್ತವಾಗಿದೆಯೋ ಅದಕ್ಕಿಂತ ಹೆಚ್ಚು ಅಪಾಯವಾಗಿದೆ. ಹಾಗಾಗಿ ಮಕ್ಕಳಿಂದ ಹಿಡಿದು ಹಿರಿಯವರಿಗೆ ಎಲ್ಲರೂ ಎಚ್ಚರದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಪ್ಯಾನ್, ಆಧಾರ್ ಅಥವಾ ಬ್ಯಾಂಕ್ ವಿವರಗಳಂತಹ ಸೂಕ್ಷ್ಮ ಮಾಹಿತಿಗಳನ್ನು ಕೇಳುವ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಬರುವ ಸುರಕ್ಷಿತವಲ್ಲದ ಯಾವುದೇ ಲಿಂಕ್‌ಗಳನ್ನು ಒತ್ತಬಾರದು ಎಂದು ತಿಳಿಸಿದರು.

ಎಡಿಸಿ ಮಹಮ್ಮದ್ ಜುಬೇರ್ ಮಾತನಾಡಿ, ಡಿಜಿಟಲ್ ಯುಗದಲ್ಲಿ ಸೈಬರ್ ವಂಚನೆಗಳಿಂದ ಜಾಗೃತರಾಗಿರಬೇಕು. ಪ್ರತಿಯೊಬ್ಬರು ತಮ್ಮ ಆನ್‌ಲೈನ್ ಖಾತೆಗಳನ್ನು ರಕ್ಷಿಸಲು ಸ್ಟ್ರಾಂಗ್ ಮತ್ತು ವಿಶಿಷ್ಟವಾದ ಪಾಸ್‌ವರ್ಡ್‌ಗಳನ್ನು ಬಳಸಬೇಕು. ಕರೆಗಳ ಮೂಲಕ ಸೂಕ್ಷ್ಮ ವಿವರಗಳಾದ ಒಟಿಪಿ, ಆಧಾರ್, ಪಾನ್ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿಗಳನ್ನು ಎಂದಿಗೂ ಹಂಚಿಕೊಳ್ಳಬಾರದು. ಅದೇ ರೀತಿಯಾಗಿ ಆನ್‌ಲೈನ್ ನಲ್ಲಿ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಮುಖ್ಯವಾಗಿ ತಮ್ಮ-ತಮ್ಮ ಡಿಜಿಟಲ್ ಗುರುತನ್ನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ (ಎನ್‌ಐಸಿ)ದ ಜಿಲ್ಲಾ ನಿರ್ದೇಶಕ ವೆಂಕಟರಮಣ ಸುರಕ್ಷಿತ ಅಂತರ್ಜಾಲ ಕುರಿತು ಸವಿವರವಾಗಿ ಮಾಹಿತಿ ತಿಳಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net