ಬಳ್ಳಾರಿ : ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಭವಿಷ್ಯ ಉತ್ತಮವಾಗಿರಲಿ ಎಂಬ ಉದ್ದೇಶದಿಂದ ನಿವೃತ್ತಿ ನಂತರವೂ ರಾಜ್ಯಾದ್ಯಂತ ಪ್ರೇರಣಾ ಚೈತ್ರಾ ಯಾತ್ರೆಯಿಂದ ವಿದ್ಯಾರ್ಥಿಗಳಿಗೆ ಬೋಧಿಸುವದರ ಜತೆಗೆ ಮೌಲ್ಯಶಿಕ್ಷಣದ ಬಗ್ಗೆ ಅರಿವು ಮೂಡಿಸಿ ಮಾದರಿ ನಿವೃತ್ತ ಶಿಕ್ಷಕ ಎನಿಸಿಕೊಂಡಿದ್ದಾರೆ.
ಕುರುಗೋಡು ನಿವಾಸಿಯಾದ ಪಿ.ಗಾದಿಲಿಂಗಪ್ಪ ಅವರು ಜಿಲ್ಲೆಯ ನಾನಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಮುಖ್ಯಗುರುಗಳಾಗಿ ಬಡ್ತಿ ಪಡೆದು 2022ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದರು. ಆದರೆ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿರುವ ಇವರು ಉಸಿರು ಇರುವವರೆಗೆ ಮಕ್ಕಳಿಗೆ ಬೋಧಿಸುವ ಆಸಕ್ತಿ ಹೊಂದಿದ್ದಾರೆ. ಆದ್ದರಿಂದ, 2023-24ನೇ ಸಾಲಿನಲ್ಲಿ ರಾಜ್ಯದ 31 ಜಿಲ್ಲೆಗಳಲ್ಲಿ ‘ ಪ್ರೇರಣಾ ಚೈತ್ರಾ ’ ಯಾತ್ರೆ ಮೂಲಕ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಮುಖ್ಯ ಪರೀಕ್ಷೆಯ ತರಬೇತಿ ನೀಡಿದರು. 2024 -25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ‘ ಕಂದೀಲು ’ ಎಂಬ ಯಾತ್ರೆಯಡಿ ಬೋಧನೆ ಮಾಡಿದರು. ಪ್ರಸ್ತಕ ಸಾಲಿನಲ್ಲಿ ಬೆಳಗಾವಿ ಯಿಂದ ಬನವಾಸಿವರೆಗೆ ‘ಕಿತ್ತೂರು ಕರ್ನಾಟಕ ಕಿರಣ’ ಎಂಬ ಯಾತ್ರೆಯ ಮೂಲಕ ಮಕ್ಕಳಿಗೆ ಕಲಿಸುತ್ತಿದ್ದಾರೆ.
ಅನಾಥ ಮಕ್ಕಳಿಗೆ ಪುರಸ್ಕಾರ : ಕೇವಲ ಮಕ್ಕಳ ಕಲಿಕೆಗೆ ಆಸಕ್ತಿ ವಹಿಸಿದಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಎಸ್‌ಎಸ್‌ಎಲ್‌ಸಿ ಯಲ್ಲಿ ಹೆಚ್ಚಿನ ಅಂಕ ಪಡೆದ ಹಾಗೂ ಪಿಯು ಪಾಸಾದ ಅನಾಥ ಮಕ್ಕಳಿಗಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮೂಲಕ ಗೌರವಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದಾರೆ. ಯಾರಿಂದ ಏನನ್ನು ಅಪೇಕ್ಷಿಸದ ತಮ್ಮ ಸ್ವಂತ ಹಣದಿಂದ ರಾಜಾದ್ಯಂತ ಕಾರ್ಯಕ್ರಮ ನೆರವೇರಿಸಿ ಇತರರಿಗೆ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಲ್ಲದೆ, ಅನಾಥ ಮಕ್ಕಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ ರಾಜ್ಯ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಜತೆ ಸೇರಿಅನಾಥ ಮಕ್ಕಳನ್ನು ಪ್ರವರ್ಗ 1ರಲ್ಲಿ ಸೇರಿಸುವಲ್ಲಿ ಪಿ.ಗಾದಿಲಿಂಗಪ್ಪ ಅವರ ಶ್ರಮವಿದೆ. ಶಿಕ್ಷಕ ವೃತ್ತಿಯಲ್ಲಿ ಇರುವಾಗಲೇ ಬಿಡುವಿನ ವೇಳೆ ಹಳೆಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಿದ ಪರಿಣಾಮ ಹಲವಾರು ಉನ್ನತ ಹುದ್ದೆಯಲ್ಲಿದ್ದಾರೆ. ಆದ್ದರಿಂದ, ಉತ್ತಮ ಸ್ಥಾನದಲ್ಲಿರುವ ಶಿಷ್ಯರೇ ಇವರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ದೇಶ ಸುತ್ತಿಸಿ ಗುರು ಕಾಣಿಕೆಯಾಗಿ ಸಮರ್ಪಿಸಿದ್ದಾರೆ.
ಕೋಟ್... ವಿದ್ಯಾರ್ಥಿಗಳಿಗೆ ಸ್ಪರ್ಧೆ ಎಲ್ಲಿ ಇರುತ್ತೆ, ಅಲ್ಲಿ ಉತ್ತಮ ಭವಿಷ್ಯ ಇರಲಿದೆ ಎಂಬುದು ಮರೆಯಬಾರದು. ಗ್ರಾಮೀಣ ಮಕ್ಕಳು ಸ್ವಾವಂಲಬಿ ಜೀವನ ನಡೆಸಿ ಇತರರಿಗೆ ಮಾದರಿಯಾಗಲಿ ಎಂಬುದೇ ಆಶಯವಾಗಿದೆ.
- ಪಿ.ಗಾದಿಲಿಂಗಪ್ಪ, ನಿವೃತ್ತ ಶಿಕ್ಷಕ.
======