ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ

Published on

ಬಳ್ಳಾರಿ ; ವೇತನ ಹೆಚ್ಚಳ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಇಲ್ಲಿನ ಡಿಸಿ ಕಚೇರಿ ಮುಂಭಾಗದಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಬುಧವಾರ ಅಹೋರಾತ್ರಿ ಧರಣಿ ಮುಂದುವರಿಯಿತು.

ಸಂಘದ ಜಿಲ್ಲಾ ಗೌರವಾಧ್ಯಕ್ಷೆ ಎ.ಶಾಂತಾ ಮಾತನಾಡಿ, ಕಳೆದ ಜನವರಿ ತಿಂಗಳಲ್ಲಿ ರಾಜ್ಯದ 42 ಸಾವಿರ ಆಶಾ ಕಾರ್ಯಕರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸತತ 4 ದಿನಗಳ ಕಾಲ ಪ್ರತಿಭಟಿಸಿದ ವೇಳೆ ಸಿಎಂ ಹಾಗೂ ಆರೋಗ್ಯ ಸಚಿವರು ಕೇಂದ್ರದ ಪ್ರೋತ್ಸಾಹ ಧನ ಮತ್ತು ರಾಜ್ಯದ ಗೌರವಧನ ಸೇರಿಸಿ 10 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, 7 ತಿಂಗಳು ಕಳೆದರೂ ಸರ್ಕಾರ ಕೊಟ್ಟ ಮಾತಿನಂತೆ ಆದೇಶ ಮಾಡಿಲ್ಲ. ಇದರ ಜತೆಗೆ ಕೆಲಸದಿಂದ ತೆಗೆದು ಹಾಕುವ ಕೆಲಸಕ್ಕೆ ಕೈಹಾಕಿದೆ ಎಂದು ಅಸಮಾಧಾನ ಹೊರಹಾಕಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕಳೆದ 17 ವರ್ಷ ಹಗಲಿರುಳು ಸೇವೆಗೈದ ಆಶಾ ಕಾರ್ಯಕರ್ತೆಯರ ಸೇವೆಯನ್ನು ಪರಿಗಣಿಸುತ್ತಿಲ್ಲ. ಕನಿಷ್ಠದಲ್ಲೇ ಕನಿಷ್ಠ 10 ಸಾವಿರ ರೂ. ಗೌರವಧನ ನೀಡದೇ ಇರೋದು ದುರಂತವಾಗಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net