ಬಳ್ಳಾರಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಾಲು, ಆಲ್ಕೊಹಾಲ್, ವಿದ್ಯುತ್, ಮುದ್ರಾಂಕ ಶುಲ್ಕ ಸೇರಿ ಅಗತ್ಯ ವಸ್ತುಗಳ ಎಲ್ಲ ಬೆಲೆಗಳ ಏರಿಕೆ, ಶಾಸಕ ಅಮಾನತನ್ನು ಖಂಡಿಸಿ ಬೆಂಗಳೂರಿನ ವಿಧಾನಸೌಧದ ಬಳಿ ಏ.2 ರಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಾಲಿನ ದರವನ್ನು 9 ರೂ. ಹೆಚ್ಚಳ ಮಾಡಿದೆ. ನಗರ ಪ್ರದೇಶದಲ್ಲಿರುವ ಗ್ರಾಹಕರ ಮೇಲೆ ದರ ಏರಿಕೆಯ ಬರೆ ಎಳೆದರೆ, ಗ್ರಾಮೀಣ ಭಾಗದ ರೈತರಿಗೆ 662 ಕೋಟಿ ರೂ. ಪ್ರೋತ್ಸಾಹಧನ ನೀಡದೆ ಬಾಕಿ ಉಳಿಸಿಕೊಂಡಿದೆ. ಇದರಿಂದ ಬೊಕ್ಕಸ ತುಂಬಿಸಿಕೊಳ್ಳುವುದರಲ್ಲಿ ನಿರತವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಗ್ರಾಹಕರು, ರೈತರು, ಬಡವರ ಮೇಲೆ ಕಾಳಜಿಯೇ ಇಲ್ಲವಾಗಿದೆ. ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನರನ್ನು ದಾರಿ ತಪ್ಪಿಸಿ, ಕಾಂಗ್ರೆಸ್ ಸಚಿವರು, ಶಾಸಕರು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.
ಕೇಂದ್ರ ಸ್ಥಾನವನ್ನು ಹೊಂದಿರುವ ರಾಬಕೊವಿ ಹಾಲು ಒಕ್ಕೂಟದ ಮೆಗಾಡೈರಿಯನ್ನು ಬಳ್ಳಾರಿಯಲ್ಲೇ ಸ್ಥಾಪಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಹಿಂದೆ ನಾನು ಕೆಎಂಎಫ್ ಅಧ್ಯಕ್ಷರಾಗಿದ್ದಾಗ ಶ್ರೀಧರಗಡ್ಡೆ ಬಳಿ ಮೆಗಾಡೈರಿ ನಿರ್ಮಿಸಲು 16 ಎಕರೆ ಜಮೀನು ಗುರುತಿಸಲಾಗಿತ್ತು. ಆದರೆ, ರಾಬಕೊವಿ ಹಾಲು ಒಕ್ಕೂಟದಲ್ಲಿ ಮೆಗಾಡೈರಿಗೆ ಬೇಕಾಗುವಷ್ಟು ಹಾಲು ರೈತರಿಂದ ಪೂರೈಕೆಯಾಗುತ್ತಿಲ್ಲ. ಮೆಗಾಡೈರಿಗೆ ಕನಿಷ್ಠ 10 ಲಕ್ಷ ಲೀ. ಹಾಲು ಸಂಗ್ರಹವಾಗಬೇಕು. ಆದರೆ, ರಾಬಕೊವಿ ಒಕ್ಕೂಟದಲ್ಲಿ ಕೇವಲ 1.85 ಲಕ್ಷ ಲೀ. ಹಾಲು ಸಂಗ್ರಹವಾಗಲಿದೆ. ಹಾಗಾಗಿ ನಾವು ಆಗ ವಿಳಂಬ ಮಾಡಲಾಗಿತ್ತು. ಇದೀಗ ವಿಜಯನಗರ ಜಿಲ್ಲೆಯಲ್ಲಿ ಸ್ಥಾಪನೆಯಾಗಲು ಸಿದ್ಧತೆ ನಡೆಸುತ್ತಿದ್ದರೆ ನಾವು ಅದನ್ನು ವಿರೋಧಿಸಿ, ಹೋರಾಟ ಮಾಡುವುದಾಗಿ ತಿಳಿಸಿದರು.
ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಜಿಲ್ಲಾ ಉಪಾಧ್ಯಕ್ಷೆ ಅರುಣಾ ಕಾಮಿನೇನಿ, ಮುಖಂಡ ಓಬಳೇಶ್ ಇದ್ದರು.