ಜಿಲ್ಲಾದ್ಯಂತ ರಕ್ತದಾನ ಶಿಬಿರ ಆಯೋಜಿಸಿ

13 YERRISWAMY 08
Published on

ಬಳ್ಳಾರಿ : ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಜನತೆಯ ಮನವೊಲಿಸಿ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸುವಂತೆ ಡಿಎಚ್‌ಒ ಡಾ.ವೈ. ರಮೇಶಬಾಬು ಸೂಚಿಸಿದರು.

ನಗರದ ಡಿಎಚ್‌ಒ ಕಚೇರಿಯಲ್ಲಿ ಬುಧವಾರ ನಡೆದ ರಕ್ತದಾನ ಶಿಬಿರಗಳ ಆಯೋಜನೆಯ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು. ಜಿಲ್ಲಾಧಿಕಾರಿಗಳ ನೇರ ನಿಗಾವಣೆಯಲ್ಲಿ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದ್ದು, ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ ರಕ್ತದ ಮಹತ್ವವನ್ನು ತಿಳಿಸಿ ಶಿಬಿರಗಳನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.

ಇತ್ತೀಚೆಗೆ ದೇವಿನಗರ ವ್ಯಾಪ್ತಿಯ ಬಸವರಾಜೇಶ್ವರಿ ಗ್ರೂಪ್ ಕಾಲೇಜಿನಲ್ಲಿ ಆಡಳಿತ ಮಂಡಳಿಯ ಸಹಕಾರದೊಂದಿಗೆ 72 ವಿದ್ಯಾರ್ಥಿಗಳು ರಕ್ತದಾನ ಮಾಡಿದ್ದಾರೆ. ನ.16 ರಂದು ಕುರುಗೋಡು ಪಟ್ಟಣದ ಸಂಘ-ಸಂಸ್ಥೆಗಳ ನೆರವಿನೊಂದಿಗೆ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ.ವಿ ಮಾತನಾಡಿ, ಕಳೆದ ತಿಂಗಳು ಸಿರಿಗೇರಿ ಗ್ರಾಮದಿಂದ ಹೆರಿಗೆಗಾಗಿ ವಿಮ್ಸ್‌ಗೆ ದಾಖಲಾದ ಗರ್ಭಿಣಿಗೆ 14 ಪಿಂಟ್ ರಕ್ತಪೂರಣ ಮಾಡಲಾಗಿತ್ತು. ಪ್ರತಿದಿನ ಅಪಘಾತಗಳಿಂದ ಗಾಯಗೊಂಡವರಿಗೆ ತೀವ್ರ ರಕ್ತಸ್ರಾವವಾದಾಗ ಹೆಚ್ಚಿನ ರಕ್ತದ ಅವಶ್ಯಕತೆಯಿದ್ದು, 18 ವರ್ಷ ಮೇಲ್ಪಟ್ಟ ಆರೋಗ್ಯವಂತ ವ್ಯಕ್ತಿಯು ರಕ್ತದಾನ ಮಾಡಲು ಮುಂದೆ ಬರುವಂತೆ ಜಾಗೃತಿ ನೀಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net