ಇಂದಿನಿಂದಲೇ ಕಾರ್ಯ ಪ್ರವೃತರಾಗಿ

Published on

ಬಳ್ಳಾರಿ : ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಲು ಇಂದಿನಿಂದಲೇ ಅಧಿಕಾರಿಗಳು ಹಾಗೂ ಶಿಕ್ಷಕರು ಕಾರ್ಯ ಪ್ರವೃತರಾಗಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಫಲಿತಾಂಶ ನಿಗದಿತ ಗುರಿ ತಲುಪಬೇಕು ಎಂಬುದು ಸಿಎಂ ಸಿದ್ದರಾಮಯ್ಯ ಅವರ ಆಶಯವಾಗಿದ್ದು, ಶೈಕ್ಷಣಿಕ ಪ್ರಗತಿ ಸಾಧಿಸಿ ಸರ್ಕಾರಕ್ಕೆ ಕೊಡುಗೆ ನೀಡಿ ಎಂದು ಸಲಹೆ ನೀಡಿದರು. ಹಂತ-ಹಂತವಾಗಿ ಅದನ್ನು ಕಾರ್ಯರೂಪಕ್ಕೆ ತರಬೇಕು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅಡಿಪಾಯ ಹಾಕಿದಂತಾಗುತ್ತದೆ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕೇವಲ ಶಿಕ್ಷಣಕ್ಕೆ ಮಾತ್ರ ಅದ್ಯತೆ ನೀಡದೆ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾಗಬೇಕು. ಅಧಿಕಾರಿಗಳು ಶಾಲೆಗಳನ್ನು ದತ್ತು ರೀತಿಯಲ್ಲಿ ಕಾಳಜಿ ವಹಿಸಬೇಕು. ಇದರಿಂದ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ನಿರೀಕ್ಷ ಫಲಿತಾಂಶ ಹೊರಹೊಮ್ಮಲಿದೆ ಎಂದರು.

ಜಿಲ್ಲೆಯ ಎಲ್ಲಾ ಶಾಲೆಗಳಿಗೂ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಇದರಿಂದ ಕಂಪ್ಯೂಟರ್ ಶಿಕ್ಷಣವೂ ಲಭಿಸುತ್ತಿದೆ. ಸಂಜೆಯ ವೇಳೆಯಲ್ಲಿ ವಿಶೇಷ ತರಗತಿ ನಡೆಸಲು ಅನುಕೂಲವಾಗುತ್ತಿದೆ. ಈ ಕುರಿತು ಸಾಕಷ್ಟು ಪ್ರಚಾರ ಮಾಡಬೇಕು. ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಹೊಂದಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮನೆಗೆ ಹೋಗಿ ಕರೆತರುವ ಕೆಲಸ ಮಾಡಬೇಕು. ಮುಖ್ಯವಾಗಿ ಉನ್ನತ ಅಧಿಕಾರಿಗಳು ಶಾಲೆ ಬಿಟ್ಟ ಮಕ್ಕಳ ಮನೆಗೆ ಭೇಟಿ ನೀಡಿ ಕರೆ ತರಬೇಕು. ಶಿಕ್ಷಣ ಇಲಾಖೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಅಧಿಕಾರಿಗಳಿದ್ದು, ಒಬ್ಬೊಬ್ಬರು ಒಂದು ಮಗುವನ್ನು ಸರ್ಕಾರಿ ಶಾಲೆಗೆ ದಾಖಲಿಸಿದರೆ, ದಾಖಲಾತಿ ಪ್ರಮಾಣವೇ ಹೆಚ್ಚಳವಾಗುತ್ತದೆ. ಈ ಕುರಿತು ಅಧಿಕಾರಿಗಳು ಒಮ್ಮೆ ಯೋಚಿಸಬೇಕು ಎಂದರು.

ಸಿಎಂ ನಿರ್ದೇಶನದಂತೆ, ಶಿಕ್ಷಣ ಇಲಾಖೆಯನ್ನು ಕೆಡಿಪಿ ಸಭೆಯಲ್ಲಿ ಮುಖ್ಯ ವಿಷಯವಾಗಿ ಚರ್ಚಿಸಬೇಕು ಎಂಬುದಾಗಿ ತಿಳಿಸಿದ್ದಾರೆ. ಎಲ್ಲ ಮೂಲಭೂತ ಸೌಕರ್ಯಗಳಿಗೆ ಈ ಇಲಾಖೆಗೆ ಸಾಕಷ್ಟು ಅನುದಾನ ಸರ್ಕಾರ ನೀಡುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆ ವಲಯಗಳಿದ್ದು, ಅವುಗಳಿಂದ ಬರುವ ಸಿಎಸ್‌ಆರ್ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ಬಳಸಬೇಕು. ಅವರಿಂದ ಯಾವುದೇ ರೀತಿಯಲ್ಲಾದರೂ ದಾನಪಡೆಯಬೇಕು ಎಂದರು.

ಕಲಬುರಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಡಾ.ಆಕಾಶ ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಶೇ.94 ರಷ್ಟು ಪಠ್ಯಪುಸ್ತಕ ಸರಬರಾಜು ಮಾಡಲಾಗಿದೆ. ಜಿಲ್ಲೆಯಲ್ಲಿ 8 ಸಾವಿರ (9 ಮತ್ತು 10 ನೇ ತರಗತಿ) ವಿದ್ಯಾರ್ಥಿಗಳು ಎನ್‌ಎಸ್‌ಕ್ಯೂಎಫ್ ಐಟಿ ವಿಷಯ ಓದುತ್ತಿದ್ದಾರೆ ಎಂದರು.

ನನ್ನ ಶಾಲೆ-ನನ್ನ ಜವಾಬ್ದಾರಿ ಕಾರ್ಯಕ್ರಮದಡಿ ಜಿಲ್ಲೆಯ 719 ಶಾಲೆಗಳಲ್ಲಿ ವಿವಿಧ ಶಾಲೆಗಳು ಸೇರಿ 718 ವಾಟ್ಸ್‌ಆಪ್ ಗುಂಪುಗಳನ್ನು ರಚಿಸಲಾಗಿದೆ. ಅದೇರೀತಿಯಾಗಿ ನಮ್ಮ ಶಾಲೆ- ನನ್ನ ಕೊಡುಗೆ ಕಾರ್ಯಕ್ರಮದಡಿ ಜಿಲ್ಲೆಯ 719 ಶಾಲೆಗಳಲ್ಲಿ 206 ಶಾಲೆಗಳು ಕೊಡುಗೆ ಸ್ವೀಕೃತವಾಗಿವೆ ಎಂದು ಸಭೆಗೆ ತಿಳಿಸಿದರು.

ಬಳಿಕ ಸಭೆಯಲ್ಲಿ ಜಿಲ್ಲೆಯ ಶಾಲೆಗಳ ಅಭಿವೃದ್ಧಿ ಕಾಮಗಾರಿ ಮತ್ತು ದುರಸ್ತಿ ಕಟ್ಟಡ ಕಾಮಗಾರಿ, ವಿವಿಧ ಅನುದಾನ ಬಳಕೆಯ ಕುರಿತು ಸುದೀರ್ಘ ಚರ್ಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net