ಒಂದು ಟಿಕೆಟ್‌ಗೆ ಮತ್ತೊಂದು ಉಚಿತ: ಸಿನಿಮಾ ಪ್ರಿಯರಿಗೆ ಬಳ್ಳಾರಿ ಚಿತ್ರಮಂದಿರಗಳ ಆಫರ್

13022021 BELLARY TheaterS
Published on

ಬಳ್ಳಾರಿ: ವ್ಯಾಪಾರಿ ವಲಯದಲ್ಲಿ ಒಂದು ಖರೀದಿಸಿದರೆ ಮತ್ತೊಂದು ಉಚಿತ ಸಾಮಾನ್ಯವಾಗಿದೆ. ಇದೀಗ ಈ ಕೊಡುಗೆ ನಗರದ ಚಿತ್ರಮಂದಿರಗಳಿಗೂ ಲಗ್ಗೆ ಇಟ್ಟಿದೆ. ಯಾವುದೇ ಸಿನಿಮಾದ ಒಂದು ಟಿಕೆಟ್ ಕೊಂಡರೆ ಮತ್ತೊಂದು ಟಿಕೆಟ್ ಉಚಿತವಾಗಿ ದೊರೆಯಲಿದೆ. ಈ ಮೂಲಕ ಒಂದು ಟಿಕೆಟ್‌ನಲ್ಲಿ ಇಬ್ಬರು ಸಿನಿಮಾ ನೋಡಬಹುದಾಗಿದೆ.

ನವೀಕರಣಗೊಂಡಿರುವ ನಗರದ ಶಿವ ಮತ್ತು ಗಂಗಾ ಚಿತ್ರಮಂದಿರದಲ್ಲಿ ಆಫರ್ ಜಾರಿಗೊಳಿಸಲಾಗಿದೆ. 150, 100 ಹಾಗೂ 70 ರೂ. ಟಿಕೆಟ್‌ಗಳಿದ್ದು, ಯಾವುದು ಕೊಂಡರೂ ಮತ್ತೊಂದು ಟಿಕೆಟ್ ಉಚಿತವಾಗಿ ನೀಡಲಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿದ ಚಿತ್ರಮಂದಿರದ ಮಾಲೀಕ ಲಕ್ಷ್ಮಿಕಾಂತ ರೆಡ್ಡಿ, ಯಾವುದೇ ಸಿನಿಮಾ ಬಿಡುಗಡೆಯಾದ ಮೊದಲ ಎರಡು ವಾರ ಒಂದಕ್ಕೆ ಒಂದು ಕೊಡುಗೆ ನೀಡಲು ವಿತರಕರು ಒಪ್ಪುವುದಿಲ್ಲ. ಮೂರನೇ ವಾರದಿಂದ ಮಂಗಳವಾರ, ಬುಧವಾರ ಹಾಗೂ ಗುರುವಾರ ಕೊಡುಗೆ ನೀಡಲಾಗುವುದು.

ಚಿತ್ರಮಂದಿರಗಳಿಗೆ ಜನರು ಬಂದೇ ಬರುತ್ತಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ನೋಡುವಂತಾಗಲಿ ಎಂಬ ಕಾರಣಕ್ಕೆ ಈ ಕೊಡುಗೆ ನೀಡಲಾಗುತ್ತಿದೆ. ನವೀಕರಣಗೊಳ್ಳುತ್ತಿರುವ ನಟರಾಜ ಮತ್ತು ಉಮಾ ಚಿತ್ರಮಂದಿರಗಳಲ್ಲೂ ಕೊಡುಗೆ ನೀಡಲಾಗುವುದು. ಮುಂದಿನ ಮೂರು ತಿಂಗಳು ಜನರ ಪ್ರತಿಕ್ರಿಯೆ ನೋಡಿ ಕೊಡುಗೆ ಮುಂದುವರಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net