ಮತ್ತೋಮ್ಮೆ ಕಮರಿದ ಚಿಲ್ಲಿ ಮಾರುಕಟ್ಟೆ ಕನಸು

Published on

ಬಳ್ಳಾರಿ : ಜಿಲ್ಲೆಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣವನ್ನು ನಬಾರ್ಡ್‌ನ ಗ್ರಾಮೀಣ ಮೂಲಸೌಕರ್ಯ ಆಭಿವೃದ್ಧಿ ನಿಧಿ (ಆರ್‌ಐಡಿಎಫ್)ಯೋಜನೆಯಡಿ ಪರಿಗಣಿಸದೆ ಇರುವುದರಿಂದ ಚಿಲ್ಲಿ ಮಾರುಕಟ್ಟೆ ನಿರ್ಮಾಣದ ಆಸೆ ಕಮರಿದೆ.

ಆಂಧ್ರದ ನೆರೆಯ ಜಿಲ್ಲೆಗಳು ಹಾಗೂ ಬಳ್ಳಾರಿಯಲ್ಲಿ ಬೆಳೆಯುವ ಮೆಣಸಿನಕಾಯಿ ಶೇ 80% ರಷ್ಟು ಬ್ಯಾಡಗಿ ಮಾರುಕಟ್ಟೆಗೆ ರವಾನೆಯಾಗಲಿದೆ. ಅದರ ಬದಲು ಇಲ್ಲಿಯೇ ಪ್ರೊಸೆಸಿಂಗ್ ಯೂನಿಟ್ ಸ್ಥಾಪಿಸಿದರೆ ಸಾಗಣೆ ವೆಚ್ಚ ಉಳಿಯುವ ಜತೆಗೆ ಒಳ್ಳೆಯ ದರ ಸಿಗಲಿದೆ. ಉದ್ದಿಮೆದಾರರಿಗೂ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಬಿಜೆಪಿ ಸರ್ಕಾರದ 2021-22ರ ಬಜೆಟ್‌ನಲ್ಲಿ ಮಾಜಿ ಸಿಎಂ ಬಿ.ಎಸ್.ಯೂಡಿಯೂರಪ್ಪ ಅವರು ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಬಳಿಕ ನಗರದ ಹೊರವಲಯದ ಆರಂಭದಲ್ಲಿ ಆಲದಹಳ್ಳಿ ಬಳಿಯ ಸರ್ವೆ ನಂ 75, 87, 88 ರಲ್ಲಿ 26 ಎಕರೆ ಪ್ರದೇಶದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ತಯಾರಿ ನಡೆಸಲಾಗಿತ್ತು. ಆದರೆ, 87 ಮತ್ತು 88 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಹಳ್ಳ ಹರಿದು ಹೋಗುತ್ತಿರುವುದನ್ನು ಮನಗಂಡ ಅಧಿಕಾರಿಗಳು ಸರ್ಕಾರದ ಹಣ ಪೋಲಾಗಲಿದೆ ಎಂಬ ಉದ್ದೇಶದಿಂದ ಸ್ಥಳ ಬದಲಾವಣೆಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಬಳಿಕ ಅದರ ಸಮೀಪದಲ್ಲಿರುವ ಸರ್ವೆ ನಂ. 25 ಸರ್ಕಾರಿ ಸ್ಥಳವಾಗಿದ್ದು, ಅಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮಾಡಿ ಎಂದು ಸರ್ಕಾರ ಸೂಚಿಸಿತು. ನಂತರ ಯಾವ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಹಿಂದೇಟು ಹಾಕಿದರು. ಬಳಿಕ ಜಿಲ್ಲೆಯಲ್ಲಿ ಒಣ ಮೆಣಸಿನಕಾಯಿ ಮಾರುಕಟ್ಟೆಯನ್ನು 25 ಕೋಟಿ ರೂ. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಕೋರಿ ಎಪಿಎಂಸಿ ನಿರ್ದೇಶಕರಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಸದ್ಯ ಆರ್ಥಿಕ ಇಲಾಖೆಯು ಪ್ರಸ್ತಾವನೆ ಪರಿಶೀಲಿಸಿ ಆರ್‌ಐಡಿಎಫ್ ಯೋಜನೆಯಡಿ ಒಟ್ಟು ಹತ್ತು ಕಾಮಗಾರಿಗಳಿಗೆ ಅನುಮೋದನೆ ನೀಡಿದೆ. ಈ ಅನುಮೋದಿತ ಕಾಮಗಾರಿಗಳಲ್ಲಿ ಒಣ ಮೆಣಸಿನಕಾಯಿ ನಿರ್ಮಾಣದ ಯೋಜನೆಯನ್ನು ಪರಿಗಣಿಸಿದೆ ಇರುವುದು ರೈತರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ.

ಸಾಗಣೆ ದರ ದುಬಾರಿ : ಈ ಪ್ರಸ್ತಕ ಸಾಲಿನಲ್ಲಿಯೇ ಜಿಲ್ಲಾದ್ಯಂತ 45 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೀಡ್ಸ್, ಡಬ್ಬಿ, ಬ್ಯಾಡಗಿ ತಳಿಯ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗಿದೆ. ಈಗಾಗಲೇ ಮೆಣಸಿನಕಾಯಿ ಬೆಳೆಗೆ ಕೂಲಿ, ಬೀಜ, ಗೊಬ್ಬರ ಮತ್ತು ಕೀಟಗಳ ಬಾಧೆಗಳಿಂದ ಬೆಳೆ ಉಳಿಸಿಕೊಳ್ಳಲು ವಿವಿಧ ರೀತಿಯ ರಾಸಯನಿಕ ಸಿಂಪಡಿಸಿ ಎಕರೆಗೆ ಲಕ್ಷಾಂತರ ರೂ. ವ್ಯಯಿಸಿದ್ದಾರೆ. ಮೆಣಸಿಕಾಯಿ ಕೀಳುವ ಹಂತಕ್ಕೆ ಬಂದಿದ್ದರೂ ಯಾವ ತಳಿಯ ಬೆಲೆ ಹೆಚ್ಚಿಲ್ಲ. ಕ್ವಿಂಟಾಲ್‌ಗೆ ಸೀಡ್ಸ್ 10 ಸಾವಿರ ರೂ. ಹಾಗೂ ಬ್ಯಾಡಗಿ 20 ಸಾವಿರ ರೂ. ಇದೆ. ಜಿಲ್ಲೆಯ ನೂರರು ರೈತರು ಕಳೆದ ವರ್ಷ ಬೆಳೆದ ಮೆಣಸಿನಕಾಯಿ ಮಾರಾಟ ಮಾಡದೆ ಕ್ಲೋಲ್ಡ್ ಸ್ಟೋರೇಜ್ ಸಂಗ್ರಹಿಸಿದ್ದಾರೆ. ಈ ವರ್ಷವಾದರೂ ಜಿಲ್ಲೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣವಾಗಬಹುದು ಇಲ್ಲಿಯೇ ಮಾರಾಟ ಮಾಡುವುದರಿಂದ ಸಾಗಣೆ ದರ ಉಳಿಯಬಹುದು ಮತ್ತು ಹೆಚ್ಚಿನ ಬೆಲೆ ಕೂಡ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತೋಮ್ಮೆ ನಿರಾಸೆ ಮೂಡಿದೆ.

ಸರ್ಕಾರ ಕಣ್ಣೀರು ಒರೆಸುವ ಕೆಲಸ : ಹಲವು ವರ್ಷಗಳಿಂದ ಬೇಡಿಕೆಯಿರುವ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣದ ಬದಲು ಇಲ್ಲಿನ ಎಪಿಎಂಸಿ ಮಾರುಕಟ್ಟೆಯ ಆವರಣದಲ್ಲಿ 11.75 ಕೋಟಿ ರೂ. ವೆಚ್ಚದಲ್ಲಿ 2,300 ಮೆಟ್ರಿಕ್ ಟನ್ ಸಾಮರ್ಥ್ಯದ ಕೋಲ್ಡ್ ಸ್ಟೋರೇಜ್ ನಿರ್ಮಾಣದ ಕಾಮಗಾರಿಗೆ ಅನುಮೋದನೆ ನೀಡಿದೆ. ಜಿಲ್ಲೆ ಹಾಗೂ ನಗರದ ಹೊರವಲಯದಲ್ಲಿಯೇ 35ಕ್ಕೂ ಅಧಿಕ ಕೋಲ್ಡ್ ಸ್ಟೋರೇಜ್‌ಗಳಿವೆ. ಕಳೆದ ವರ್ಷದ ನಿರೀಕ್ಷಿತ ಬೆಲೆಯಲ್ಲಿ ಬೆಲೆ ಸಿಗದೆ ಇರುವುದರಿಂದ ಮೆಣಸಿಕಾಯಿಯನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲಾಗಿದೆ. ಆದರೆ, ಪ್ರತಿ ವರ್ಷ ಖಾಲಿ ಖಾಲಿಯಾಗಿ ಕೋಲ್ಡ್ ಸ್ಟೋರೇಜ್ ಉಳಿಯುತ್ತಿವೆ. ಇಂತಹ ನಡುವೆ ಸರ್ಕಾರದ ಕೋಲ್ಡ್ ಸ್ಟೋರೇಜ್ ನಿರ್ಮಾಣ ಮಾಡಿ ಕಣ್ಣೀರು ಒರೆಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂಬುದು ರೈತರ ಅಭಿಪ್ರಾಯ.

ಕೋಟ್... ಜಿಲ್ಲೆಯಲ್ಲಿ ಹೊಸದಾಗಿ ಚಿಲ್ಲಿ ಮಾರುಕಟ್ಟೆ ನಿರ್ಮಾಣವಾಗುವರೆಗೂ ಎಪಿಎಂಸಿಯಲ್ಲಿಯೇ ಚಿಕ್ಕದಾದ ಸ್ಥಳದಲ್ಲಿಯೇ ಚಿಲ್ಲಿ ಮಾರುಕಟ್ಟೆ ಸ್ಥಾಪಿಸಿ ರೈತರಿಗೆ ಸರ್ಕಾರ ಸಹಾಯ ಮಾಡಲಿ ಎಂಬುದು ಒತ್ತಾಯ.

- ವೈ.ಎಂ.ಸತೀಶ್, ವಿಧಾನಪರಿಷತ್ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net