ಬಳ್ಳಾರಿ ; ಪ್ರಸಕ ಸಾಲಿನ ಕರ್ನಾಟಕ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದ್ದು, ಜಿಲ್ಲೆಯನ್ನು ಕಡೆಗಣಿಸಲಾಗಿದೆ ಎಂದು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಆರೋಪಿಸಿದರು.
ನಗರದ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ರಂಗಭೂಮಿಗೆ ಸೇವೆ ಸಲ್ಲಿಸಿದ ಅನೇಕ ಕಲಾವಿದ್ದರಿದ್ದಾರೆ. ಆದರೆ, ಒಬ್ಬರನ್ನು ಆಯ್ಕೆ ಮಾಡದೇ ಬೆಂಗಳೂರಿನ ಭಾಗದವರನ್ನೇ ಆಯ್ಕೆ ಮಾಡಿದ್ದು ಬೇಸರ ಮೂಡಿಸಿದೆ. ಬೆಂಗಳೂರಿಗೆ ಹತ್ತು ಪ್ರಶಸ್ತಿ ನೀಡುವ ಬದಲು ಉಳಿದ ಜಿಲ್ಲೆಗಳು ಪ್ರಶಸ್ತಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಅಕಾಡೆಮಿಯು ಸಾಮಾಜಿಕ ನ್ಯಾಯ ನೀಡುವಲ್ಲಿ ಎಡವಿದ್ದು ಅಕಾಡೆಮಿಯ ನಿರ್ಲಕ್ಷೃ ಕಾಣುತ್ತಿದೆ ಎಂದರು.
ಕಳೆದ ವರ್ಷ ಕರ್ನಾಟಕ ನಾಟಕ ಅಕಾಡೆಮಿಯಿಂದ ಮೂರು ವರ್ಷಗಳ ಅಕಾಡೆಮಿಯ ಪ್ರಶಸ್ತಿ ನೀಡಲಾಯಿತು. ಒಟ್ಟು 90 ಪ್ರಶಸ್ತಿಗಳ ವಿತರಣೆಯಲ್ಲಿ ಬಳ್ಳಾರಿಗೆ ಒಂದು ಪ್ರಶಸ್ತಿ ದೊರೆತಿದೆ. ಜಿಲ್ಲೆಯ ಸಾಹಿತ್ಯ ಮತ್ತು ಸಾಂಸ್ಕ್ರತಿಕ ವಲಯಕ್ಕೆ ನೀಡಿರುವ ಅಪಾರ ಕೊಡುಗೆ ಹಾಡಿ ಹೊಗಳುವ ಅಕಾಡೆಮಿಯ ಅಧ್ಯಕ್ಷರು ಪ್ರಶಸ್ತಿ ವಿಚಾರ ಬಂದಾಗ ಜಿಲ್ಲೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಅಕಾಡೆಮಿಯ ಸದಸ್ಯ ಶಿವನಾಯಕ ದೊರೆ ಜಿಲ್ಲಾ ಉಸ್ತುವಾರಿಯಾಗಿದ್ದು ಜಿಲ್ಲೆಯನ್ನು ನಿರ್ಲಕ್ಷಿೃಸಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ಕಲಾವಿದರನ್ನು ಒಳಗೊಂಡು ಸಭೆ ಏರ್ಪಡಿಸಿ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರಕ್ಕೆ ಗಮನ ಸೆಳೆಯಲಿದ್ದೇವೆ ಎಂದು ಹೇಳಿದರು.
ಕಲಾವಿದರಾದ ರಮಣಪ್ಪ ಭಜಂತ್ರಿ, ಜಯಶ್ರೀಪಾಟೀಲ್, ತಿಪ್ಪೇಸ್ವಾಮಿ, ಎರ‌್ರಿಸ್ವಾಮಿ, ಹುಲುಗಪ್ಪ ಇದ್ದರು.