ಅಧಿಕಾರಿಗಳು ಮುಂಜಾಗ್ರತೆ ಕೈಗೊಳ್ಳಿ

Published on

ಬಳ್ಳಾರಿ ; ರಾಜ್ಯದಲ್ಲಿ ಮುಂಗಾರು ಮಳೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಮಳೆಯಿಂದಾಗುವ ಹಾನಿ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಡಿಸಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು. ಈ ಬಾರಿ ಹೆಚ್ಚು ಮಳೆಯಾಗುವ ಸಂಭವವಿದ್ದು, ಪ್ರವಾಹ, ಪ್ರಾಣ, ಬೆಳೆ, ಮನೆ ಹಾನಿ ತಡೆಗಟ್ಟಲು ಅಧಿಕಾರಿಗಳು ಕಾರ್ಯ ಪೃವೃತ್ತರಾಗಬೇಕು ಎಂದರು.

ಕಂಪ್ಲಿ ಮತ್ತು ಸಿರಗುಪ್ಪ ತಾಲೂಕು ಭಾಗದಲ್ಲಿ ಹೆಚ್ಚು ಜಾಗೃತಿ ನೀಡಬೇಕು. ಕಾಳಜಿ ಕೇಂದ್ರಗಳನ್ನು ತೆರೆಯಲು ಸ್ಥಳ ಗುರುತಿಸುವುದು, ಇತರೆ ಪೂರಕ ದಾಸ್ತಾನು ಸಜ್ಜುಮಾಡಿಕೊಳ್ಳಬೇಕು. ಔಷಧಿ ದಾಸ್ತಾನು ಇಟ್ಟುಕೊಳ್ಳಬೇಕು. ಈ ಕುರಿತು ತಾಲೂಕು ವೈದ್ಯಾಧಿಕಾರಿಗಳ ಜತೆ ತಹಶೀಲ್ದಾರರು ಸಂಪರ್ಕದಲ್ಲಿರಬೇಕು. ಪ್ರವಾಹ ಪರಿಸ್ಥಿತಿ ಉದ್ಭವಿಸಿದರೆ ಜನ-ಜಾನುವಾರುಗಳಿಗೆ ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಅತಿಹೆಚ್ಚು ಮಳೆಯಿಂದಾಗಿ ರಸ್ತೆಗಳಲ್ಲಿ ಮರ ಮತ್ತು ವಿದ್ಯುತ್ ಕಂಬಗಳು ಬೀಳುವುದು ಕಳೆದ ತಿಂಗಳಿನಲ್ಲಾದ ಮಳೆಯಿಂದ ಕಂಡುಬಂದಿದ್ದು, ರಸ್ತೆಗೆ ಅಡ್ಡಲಾಗಿ ಇರುವ ಮರಗಳ ಕಟಾವಿಗೆ ಅರಣ್ಯ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಬೇಕು. ಆಯಾ ತಾಲೂಕು ತಹಶೀಲ್ದಾರರ ಮತ್ತು ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಸಹಾಯವಾಣಿ ಸಂಖ್ಯೆ ಆರಂಭಿಸಬೇಕು. ಇದಕ್ಕೆ ಪೂರಕವಾಗಿ ಅಧಿಕಾರಿಗಳನ್ನು ನೇಮಿಸಬೇಕು. ಮಳೆಗಾಲದಲ್ಲಿ ಜೆಸ್ಕಾಂ ಸಂಬಂಧಿತ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 1912 ಕುರಿತು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಈ ಬಾರಿ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದ್ದು, ಡಿಎಪಿ ಗೊಬ್ಬರದ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ಇದರ ಬದಲಾಗಿ ರೈತರಿಗೆ ಸಂಯುಕ್ತ ರಸಗೊಬ್ಬರ ಬಳಸಲು ಅಗತ್ಯ ಸಲಹೆಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net