

ಬಳ್ಳಾರಿ: ಕೇಂದ್ರದ ಮೀಸಲಾತಿ ಪಟ್ಟಿಯಲ್ಲಿ ವೀರಶೈವ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಮಹಾಸಭಾ ಅಧ್ಯಕ್ಷ ಡಾ.ಎನ್.ತಿಪ್ಪಣ್ಣ ನೇತೃತ್ವದಲ್ಲಿ ಸಮುದಾಯದವರು ನಗರದ ಮುನ್ಸಿಪಾಲ್ ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.
ವೀರಶೈವ ಲಿಂಗಾಯತ ಸಮುದಾಯ ಕೃಷಿ ಮತ್ತು ಕೃಷಿ ಆಧಾರಿತ ಕಸಬುಗಳನ್ನು ಅವಲಂಬಿಸಿ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಸಮಾಜದ ಜನ ಕೇಂದ್ರ ಸರ್ಕಾರದ ಶೈಕ್ಷಣಿಕ ಸಂಸ್ಥೆಗಳಲ್ಲಿ ಮತ್ತು ಕೇಂದ್ರದ ನೇಮಕಾತಿಯಲ್ಲಿ ವಂಚಿತರಾಗುತ್ತಿದ್ದಾರೆ. ಸಮಾಜದ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಕೇಂದ್ರದ ಮೀಸಲಾತಿಯ ಒಬಿಸಿ ಪಟ್ಟಿಯಲ್ಲಿ ಸೇರಿಸಬೇಕು. ಈಗ ಹೋರಾಟ ಅರಂಭಗೊಂಡಿದೆ. ರಾಜ್ಯ ಸರ್ಕಾರ, ಸಂಸದರು ಒತ್ತಡ ತಂದು ಕೇಂದ್ರ ಸರ್ಕಾರ ಸ್ಪಂದಿಸುವಂತೆ ಮಾಡಬೇಕು. ಅಲ್ಲದೆ, ರಾಜ್ಯದ ಮೂರನೇ ಹಿಂದುಳಿದ ವರ್ಗಗಳ ಆಯೋಗದ(ನ್ಯಾ.ಚಿನ್ನಪ್ಪರೆಡ್ಡಿ ಆಯೋಗ) ವರದಿಯಂತೆ ರಾಜ್ಯ ಸರ್ಕಾರ ಇತರೇ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಮತ್ತು ಈಗಾಗಲೇ ಪಟ್ಟಿಯಲ್ಲಿ ಸೇರಿರುವ ಸಮುದಾಯಗಳಿಗಿಂತ ನಮ್ಮ ಸಮುದಾಯ ಹಿಂದುಳಿದೆ. ಇದರಲ್ಲಿ ವೀರಶೈವ ಲಿಂಗಾಯತ 16 ಉಪಪಂಗಡಗಳು ಈಗಾಗಲೇ ಒಬಿಸಿ ಪಟ್ಟಿಯಲ್ಲಿವೆ. ಬಹುತೇಕ ಉಪ ಪಂಗಡಗಳು ಪಟ್ಟಿಯಿಂದ ಹೊರಗೆ ಉಳಿದಿದೆ ಎಂದು ಎಡಿಸಿ ಪಿ.ಎಸ್.ಮಂಜುನಾಥ್‌ಗೆ ಸಲ್ಲಿಸಿದ ಮನವಿಯಲ್ಲಿ ವಿವರಿಸಲಾಗಿದೆ.
ಮಾಜಿ ಎಂಎಲ್ಸಿ ಅಲ್ಲಂ ವೀರಭದ್ರಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಡಾ.ಎಸ್.ಜೆ.ವಿ.ಮಹಿಪಾಲ್, ಮಹಾಸಭಾದ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಎಂ.ಗುರುಸಿದ್ದಸ್ವಾಮಿ, ಕಾರ್ಯದರ್ಶಿ ಬಿ.ವಿ.ಬಸವರಾಜ್, ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಸಹ ಕಾರ್ಯದರ್ಶಿ ದರೂರು ಶಾಂತನಗೌಡ, ಖಜಾಂಚಿ ಗೋನಾಳ್ ರಾಜಶೇಖರಗೌಡ, ವೀ.ವಿ.ಸಂಘದ ಮಾಜಿ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ, ಮಹಾಸಭಾದ ರಾಜ್ಯ ಕಾರ್ಯದರ್ಶಿ ಕೆ.ಬಿ.ಶ್ರೀನಿವಾಸ ರೆಡ್ಡಿ, ಮುಖಂಡರಾದ ಅರವಿ ಬಸವನಗೌಡ, ಜೆ.ಎಂ.ಬಸವರಾಜ್ ಸ್ವಾಮಿ, ಅಲ್ಲಂ ಪ್ರಶಾಂತ್, ಗಂಗಾವತಿ ವೀರೇಶ್ ಇತರರಿದ್ದರು.