ದಂಡ ಪಾವತಿಸದ ಕಾಲೇಜುಗಳಿಗೆ ಫಲಿತಾಂಶವಿಲ್ಲ

Published on

ಬಳ್ಳಾರಿ : ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಕೆಲ ಬಿ.ಇಡಿ ಕಾಲೇಜುಗಳಿಗೆ ಮಾತ್ರ ಎರಡು ಹಾಗೂ ನಾಲ್ಕನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿದ್ದು, ಉಳಿದ ಕಾಲೇಜುಗಳಿಗೆ ಫಲಿತಾಂಶ ಪ್ರಕಟಿಸದೆ ವಿವಿ ತಡೆ ಹಿಡಿದಿದೆ.

ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ವ್ಯಾಪ್ತಿಯ ಒಟ್ಟು 21 ಬಿ.ಇಡಿ ಕಾಲೇಜುಗಳಿವೆ. ಕೆಲ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳ ಫಲಿತಾಂಶ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ವಾಸ್ತವದಲ್ಲಿ ಪಡೆದ ಅಂಕಗಳ ಬದಲಿಗೆ ಆನ್‌ಲೈನ್‌ನಲ್ಲಿ ಹೆಚ್ಚಿನ ಅಂಕ ನಮೂದಿಸಿದ ಅಕ್ರಮ ಬೆಳಕಿಗೆ ಬಂದಿತ್ತು. ಇದರ ಪರಿಣಾಮ ವಿವಿಯು ತನಿಖಾ ತಂಡ ರಚಿಸಿ ವರದಿ ನೀಡುವಂತೆ ಆದೇಶಿಸಿತ್ತು. ಬಳಿಕ ತಂಡವು ವಿಚಾರಿಸಿ ಕೆಲ ಕಾಲೇಜುಗಳಿಗೆ ಅಕ್ರಮ ಬಯಲಿಗೆ ಎಳೆದ ಪರಿಣಾಮ ದಂಡ ವಿಧಿಸಿತ್ತು. ಆದರೆ, ಈವರೆಗೂ ಯಾವ ಯಾವ ಕಾಲೇಜುಗಳು ದಂಡ ಪಾವತಿಸಲ್ಲಿಯೂ ಅವುಗಳಿಗೆ ಬಿ.ಇಡಿ ಫಲಿತಾಂಶ ಪ್ರಕಟಿಸದೆ ತಡೆಹಿಡಿದಿದೆ. ಕಾಲೇಜು ಆಡಳಿತ ಮಂಡಳಿ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಶಿಕ್ಷೆ ಎಂಬಂತೆಯಾಗಿದೆ. ಒಟ್ಟು 21 ಕಾಲೇಜುಗಳಲ್ಲಿ ಹನ್ನೊಂದು ಕಾಲೇಜುಗಳಿಗೆ ದಂಡ ವಿಧಿಸಿದ್ದು, ಇದರಲ್ಲಿ ಮೂರು ಕಾಲೇಜುಗಳು ಮಾತ್ರ ದಂಡ ಪಾವತಿಸಿದ್ದು, ಉಳಿದ ಎಂಟು ಕಾಲೇಜುಗಳು ದಂಡ ಪಾವತಿಸದೆ ವಿಳಂಬ ಮಾಡುತ್ತಿವೆ.

ಸರ್ವರ್ ಸಮಸ್ಯೆ : ಬಿ.ಇಡಿ ವಿದ್ಯಾರ್ಥಿಗಳ ಅಂತರಿಕ ಪರೀಕ್ಷೆ ಅಂಕಗಳನ್ನು ವಿವಿಯ ಆಡಳಿತ ಮಂಡಳಿ ನಮೂದಿಸಬೇಕು. ಆದರೆ, ವಿವಿ ನಿರ್ವಹಿಸದೆ ಬಿ.ಇಡಿ ಕಾಲೇಜುಗಳಿಗೆ ವಹಿಸಿದೆ. ಆನ್‌ಲೈನ್‌ನಲ್ಲಿ ಅಂಕ ನಮೂದಿಸುವ ವೇಳೆ ಸರ್ವರ್ ಸಮಸ್ಯೆಯಿಂದ ಹೆಚ್ಚಿನ ಅಂಕಗಳು ನಮೂದು ಆಗಿವೆ ಎಂಬುದು ಪ್ರಾಂಶುಪಾಲರ ವಾದ. ಈ ಅಕ್ರಮಕ್ಕೆ ನೇರ ಹೊಣೆ ಕಾಲೇಜು ಪ್ರಾಂಶುಪಾಲರೆ ಎಂಬುದಾಗಿ ಆರೋಪಿಸಿ ದಂಡದ ಹಣವನ್ನು ಪ್ರಾಂಶುಪಾಲರು ಪಾವತಿಸಬೇಕು ಎಂದು ವಿವಿ ಸೂಚಿಸಿದೆ. ಆದರೆ, ಅಕ್ರಮ ನಡೆದಿರುವ ಕಾಲೇಜುಗಳಿಗೆ ಎಪ್ಪತೈದು ಸಾವಿರ, ಒಂದು, ಎರಡು ಹಾಗೂ ಮೂರು ಲಕ್ಷ ರೂ. ದಂಡ ವಿಧಿಸಿದೆ. ಕೆಲ ಕಾಲೇಜುಗಳ ಪ್ರಾಂಶುಪಾಲರಿಗೆ ತಿಂಗಳಿಗೆ ವೇತನ ಮೂವತ್ತರಿಂದ ನಾಲವತ್ತು ಸಾವಿರ ರೂ. ಯಿದೆ. ವರ್ಷವಿಡಿ ದುಡಿದ ಹಣವನ್ನು ದಂಡಕ್ಕೆ ಪಾವತಿಸಿದರೆ ಕುಟುಂಬ ನಿರ್ವಹಣೆ ಹೇಗೆ ? ಸರ್ವರ್ ಸಮಸ್ಯೆ ಇರದಿದ್ದರೆ ಯಾವ ತಪ್ಪು ಆಗುತ್ತಿರಿಲಿಲ್ಲ. ಅಲ್ಲದೆ, ಇದರ ಬಗ್ಗೆ ಇತ್ತೀಚೆಗೆ ಕುಲಪತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡ ದಂಡ ಪಾವತಿಸಲ್ಲ ಎಂಬುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ. ಕಾಲೇಜುಗಳಿಗೆ ಭೇಟಿ ನೀಡುವ ಅಂತರಿಕ ಪರಿಶೀಲನಾ ಸಮಿತಿ ತಂಡ ರದ್ದತಿಗಾಗಿ 21 ಸಾವಿರ ರೂ. ಹಾಗೂ ಪಾರಾ ಅರ್ಜಿಗಳನ್ನು ವಿತರಿಸುವ ವೇಳೆ ಬಿ.ಇಡಿ ಎಲ್ಲ ಕಾಲೇಜಗಳಿಂದ ತಲಾ 50 ಸಾವಿರ ರೂ. ವಿವಿಗೆ ನೀಡಲಾಗಿದ್ದು ರಸೀದಿ ಕೂಡ ವಿತರಿಸಲ್ಲ ಎಂದು ಬಿ.ಇಡಿ ಕಾಲೇಜು ಪ್ರಾಂಶುಪಾಲರೊಬ್ಬರು ಆರೋಪಿಸಿದರು.

ಬಾಕ್ಸ್ : ಕಾಲೇಜು ಆಡಳಿತ ಮಂಡಳಿ ಹಾಗೂ ವಿವಿಯು ಪ್ರಶಿಕ್ಷಣಾರ್ಥಿಗಳ ಜತೆ ಚಲ್ಲಾಟವಾಡುತ್ತಿದೆ. ಲಕ್ಷಾಂತರ ರೂ. ಶುಲ್ಕ ಪಾವತಿಸಿ ಬಿ.ಇಡಿ ಕಾಲೇಜಿನಲ್ಲಿ ಪ್ರವೇಶಾತಿ ಪಡೆದಿರುತ್ತಾರೆ. ಆದರೆ, ಇತ್ತ ವಿವಿಯು ಅಂತರಿಕ ಪರಿಶೀಲನಾ ಸಮಿತಿಯು ಕಾಲೇಜುಗಳಿಗೆ ಭೇಟಿ ನೀಡದೆ ಇದ್ದರಿಂದ ಅಕ್ರಮ ನಡೆದಿದೆ. ಕಾಲೇಜು ಆಡಳಿತ ಮಂಡಳಿಗೆಗ ಸರ್ವರ್ ಸಮಸ್ಯೆ ಇರದಿದ್ದರೆ ವಾಸ್ತವ ಅಂಕಗಳೆ ನಮೂದು ಆಗುತ್ತಿದ್ದವು ಎಂಬ ವಾದ. ಯಾರ ಜವಾಬ್ದಾರಿ ಅವರು ಸೂಕ್ತವಾಗಿ ನಿರ್ವಹಿಸಿದ್ದರೆ ವಿದ್ಯಾರ್ಥಿಗಳಿಗೆ ಸೂಕ್ತ ಸಮಯದಲ್ಲಿ ಫಲಿತಾಂಶ ಪ್ರಕಟಗೊಳ್ಳುತ್ತಿದ್ದವು.

ಕೋಟ್.... ಹೆಚ್ಚಿನ ಅಂಕ ನೀಡಿದ ಕಾಲೇಜುಗಳ ಬಗ್ಗೆ ತನಿಖಾ ತಂಡ ವರದಿ ನೀಡಿದ್ದರಿಂದ ದಂಡ ವಿಧಿಸಲಾಗಿದೆ. ದಂಡ ಪಾವತಿಸದ ಕಾಲೇಜುಗಳಿಗೆ ಫಲಿತಾಂಶ ಪ್ರಕಟಣೆಯಾಗುವುದಿಲ್ಲ. ಮುಂದಿನ ದಿನಗಳಲ್ಲೇ ಎಲ್ಲ ಬಿ.ಇಡಿ ಕಾಲೇಜುಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕಾಲೇಜಿನಲ್ಲಿ ಮೂಲ ಸೌಕರ್ಯ, ದಾಖಲಾತಿ ಹಾಗೂ ಸಿಬ್ಬಂದಿಯ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಮುಂದೆ ಇಂತಹ ಅಕ್ರಮಯಾಗದಂತೆ ತಡೆಯಲು ಕ್ರಮವಹಿಸಲಾಗುವುದು.

- ಪ್ರೊ.ಎಂ.ಮುನಿರಾಜು, ಕುಲಪತಿ, ವಿಎಸ್‌ಕೆ ವಿವಿ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net