ಬಳ್ಳಾರಿ : ದಿನಪತ್ರಿಕೆಗಳು ಜಗತ್ತಿನ ನಿತ್ಯದ ಆಗು ಹೋಗು ಮತ್ತು ಪ್ರಮುಖ ವಿಚಾರಗಳನ್ನು ತಿಳಿಸುವ ಜ್ಞಾನದ ಕಣಜಗಳಾಗಿದ್ದು , ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ದಾರಿ ದೀಪವಾಗಿವೆ ಎಂದು ಕುರುಗೋಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ. ಡಾ.ತಿಪ್ಪೇರುದ್ರ ಅಭಿಪ್ರಾಯಪಟ್ಟರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ( ಸ್ವಾಯತ್ತ ) ಕಾಲೇಜಿನ ಸಭಾಂಗಣದಲ್ಲಿ ಪ್ರೇರಣಾಕೋಶ, ಉದ್ಯೋಗ ಭರವಸೆ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶಗಳ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನಲ್ಲಿ ದಿನಪತ್ರಿಕೆಗಳ ಮಹತ್ವ’ ಎಂಬ ವಿಷಯದ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳುವ ಹಲವು ಬಗೆಯ ವಿಷಯಗಳನ್ನು, ಪ್ರಚಲಿತ ವಿದ್ಯಮಾನ ಮತ್ತು ಸುತ್ತಮುತ್ತಲು ನಡೆಯುವ ಸಂಗತಿಗಳೊಂದಿಗೆ ಸಮೀಕರಿಸಿ ಪುನರ್ ಮನನ ಮಾಡಿಕೊಳ್ಳಬೇಕು. ಪತ್ರಿಕೆಗಳಲ್ಲಿ ಪ್ರಕಟವಾಗುವ ಮುಖ್ಯ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳಬೇಕು. ಬಹಳ ಮುಖ್ಯವಾಗಿ ಆಳವಾದ ಜ್ಞಾನ, ವಿಷಯ ಗ್ರಹಿಕೆ, ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಲು ಸಕಾರಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜು ಪ್ರಾಚಾರ್ಯ ಡಾ. ಪ್ರಹ್ಲಾದ ಚೌದ್ರಿ ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಜಗತ್ತಿಗೆ ತಮ್ಮನ್ನು ತಾವು ತೀವ್ರವಾಗಿ ಒಡ್ಡಿಕೊಳ್ಳಬೇಕು. ದಿನಪತ್ರಿಕೆಗಳ ನಿರಂತರ ಓದು, ಮಾಹಿತಿ ಸಂಗ್ರಹ, ಏಕಾಗ್ರತೆ, ಶ್ರದ್ಧೆ, ಪರಿಶ್ರಮ, ಆತ್ಮವಿಶ್ವಾಸ, ಗುರಿ ಇದ್ದರೆ ಯಶಸ್ಸು ಖಂಡಿತ ಸಾಧ್ಯ ಎಂದರು.
ಪ್ರೇರಣಾ ಘಟಕದ ಸಂಚಾಲಕ ಎಂ.ಕಲ್ಯಾಣಬಸವ ಮಾತನಾಡಿ, ಸರ್ಕಾರಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮಾಜದ ಸಾಧಕರಿಂದ ಪ್ರೇರಣೆ ದೊರೆಯಲಿ ಎನ್ನುವ ಕಾರಣಕ್ಕೆ ಇಲಾಖೆ ರೂಪಿಸಿದ ಕಾರ್ಯಕ್ರಮ ಇದಾಗಿದೆ ಎಂದರು.
ಪ್ರಮುಖರಾದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರ್ ಸಾಬ್ ದಿನ್ನಿ, ಪ್ರೇರಣಾ ಕೋಶದ ಸಹ ಸಂಚಾಲಕ ಡಾ. ಸಲಿಹಾ, ಪ್ರಾಧ್ಯಾಪಕಿ ಡಾ. ಪಲ್ಲವಿ ಇದ್ದರು.