ಬಳ್ಳಾರಿ : ಜಿಲ್ಲಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ತಡರಾತ್ರಿ ಜನರು ಸ್ವಾಗತಿಸಿದರು. ಮಂಗಳವಾರ ಮಧ್ಯರಾತ್ರಿ ಆಗುತ್ತಿದ್ದಂತೆ ಸ್ನೇಹಿತರಿಗೆ, ಕುಟುಂಬ ಸದಸ್ಯರಿಗೆ ಮೊಬೈಲ್ ಕರೆ, ಎಸ್‌ಎಂಎಸ್, ವಾಟ್ಸ್‌ಆ್ಯಪ್ ಮೂಲಕ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು. ನಗರದ ವಿವಿಧ ವೃತ್ತ, ಮನೆಗಳಲ್ಲಿ ಕೇಕ್‌ಗಳನ್ನು ಕತ್ತರಿಸಿ ಹೊಸ ವರ್ಷವನ್ನು ಆಚರಿಸಿದರು.
ಹೊಸ ವರ್ಷಾಚರಣೆಯ ಅಂಗವಾಗಿ ಇಲ್ಲಿನ ಹಲವು ಬೇಕರಿಗಳಲ್ಲಿ ವಿವಿಧ ಬಗೆಯ ಕೇಕ್ ತಯಾರಿಸಲಾಗಿತ್ತು. ಗ್ರಾಹಕರು ಮುಗಿಬಿದ್ದು ಖರೀದಿಸಿದರು. ಜನರು ಆಕರ್ಷಿಸುವ ನಿಟ್ಟಿನಲ್ಲಿ ಬೇಕರಿಗಳಲ್ಲಿ ಗಿಟಾರ್, ಚಿಟ್ಟೆ ಸೇರಿದಂತೆ ವಿವಿಧ ರೀತಿಯ ವಿನ್ಯಾಸ ಕೇಕ್ ತಯಾರಿಸಿ ಮಾರಾಟ ಮಾಡಿದರು. ಕಳೆದ ವರ್ಷಕ್ಕಿಂತಲೂ ಈ ಬಾರಿ ಹೊಸ ವರ್ಷದ ಕೇಕ್ ಖರೀದಿಸುವಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಿತ್ತು. ಪ್ರತಿಯೊಬ್ಬರು ಕುಟುಂಬಸ್ಥರು, ಸ್ನೇಹಿತರೊಂದಿಗೆ 2024ನೇ ವರ್ಷಕ್ಕೆ ಬಿಳ್ಕೋಟ್ಟು, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ 2025ನೇ ವರ್ಷವನ್ನು ಸ್ವಾಗತಿಸಿ ಸಂಭ್ರಮಿಸಿದರು. ಇಲ್ಲಿನ ಬಹುತೇಕ ಬಾರ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಯುವಕರು ನಡುರಾತ್ರಿಯವರೆಗೂ ಮದ್ಯ ಸೇವಿಸಿ ಹೊಸವರ್ಷ ಬರಮಾಡಿಕೊಂಡರು.
ಬುಧವಾರ ನಗರದ ಕನಕ ದುರ್ಗಮ್ಮ, ಬಾಲಾಜಿ, ಅಮೃತೇಶ್ವರ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಹಲವರು ಕುಟುಂಬ ಸಮೇತರಾಗಿ ಭೇಟಿ ನೀಡಿ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು. ಅಲ್ಲದೆ, ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗಿದವು. ಜಿಲ್ಲೆಯ ವಿವಿಧ ಕಾಲೇಜಿನ ಯುವಕ, ಯುವತಿಯರು ಸೇಹ್ನಿತರೊಂದಿಗೆ ಸಮೀಪದ ಪಾರ್ಕ್‌ಗಳಲ್ಲಿ ಕೇಕ್ ಕತ್ತರಿಸಿ ಹೊಸ ವರ್ಷ ಆಚರಿಸುವುದು ಕಂಡು ಬಂತು. ಹಲವರು ಸ್ಥಳೀಯ ಪ್ರಸಿದ್ದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಸಂಭ್ರಮಿಸಿದರು.
ಪೊಲೀಸ್ ಸರ್ಪಗಾವಲು : ಹೊಸ ವರ್ಷದ ಸಂಭ್ರಮಚಾರಣೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗ್ರತೆ ವಹಿಸಿತ್ತು. ಇಲ್ಲಿನ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಲಾಗಿತ್ತು. ಮೇಲಸೇತುವೆಗಳ ಮೇಲೆ ಮೋಜು ಮಸ್ತಿಮಾಡುವುದನ್ನು ತಡೆಗಟ್ಟಲು ರಸ್ತೆ ನಿರ್ಬಂಧಿಸಿ ಪರ್ಯಾಯ ರಸ್ತೆಯಲ್ಲಿ ಸಂಚಾರಿಸಲು ಅನುಕೂಲ ಮಾಡಲಾಗಿತ್ತು. ಎಲ್ಲ ಧಾರ್ಮಿಕ ಸ್ಥಳಗಳ ಸುತ್ತಮುತ್ತಲೂ ಬಿಗಿಬಂದೋಬಸ್ತ್ ವಹಿಸಲಾಗಿತ್ತು. ಅಲ್ಲದೆ, ರಸ್ತೆಯಲ್ಲಿ ಕೇಕ್ ಕಟ್ ಮಾಡುವುದು, ಸಾರ್ವಜನಿಕ ಪ್ರದೇಶ ಹಾಗೂ ರಸ್ತೆ ಮೇಲೆ ಮದ್ಯಪಾನ ಸೇವಿಸುವುದನ್ನು ನಿಷೇಧಿಸಲಾಗಿತ್ತು.
ಮದ್ಯ ಮಾರಾಟ : ಜಿಲ್ಲೆಯಲ್ಲಿ ಹೊಸ ವರ್ಷ ಸಂಭ್ರಮಚಾರಣೆಗಾಗಿಯೇ ವಿವಿಧ ರೀತಿಯ ಮೌಲ್ಯದ 10,481 ಬಾಕ್ಸ್ ಹಾಗೂ ಕಳೆದ ಒಂದು ತಿಂಗಳಲ್ಲೇ 1,27,898 ಬಾಕ್ಸ್ ಮದ್ಯವನ್ನು ಅಬಕಾರಿ ಇಲಾಖೆಯಿಂದ ಎತ್ತುವಳಿ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಎನ್.ಮಂಜುನಾಥ ತಿಳಿಸಿದರು.