

ಬಳ್ಳಾರಿ: ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಚರ್ಚಿಸಿದ್ದಾರೆ. ನೂತನ ಶಾಸಕರಿಗೆ ನ್ಯಾಯ ಒದಗಿಸುವ ಮೂಲಕ ಮುಖ್ಯಮಂತ್ರಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.
ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ. ನನಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ಜನರ ಬೇಡಿಕೆ ಇದ್ದು ಅದನ್ನು ನಾನು ಅಲ್ಲಗಳೆಯುವುದಿಲ್ಲ. ಈ ಕುರಿತು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕೆಂದು ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಸರ್ಕಾರ ಆರ್ಥಿಕವಾಗಿ ಸುಸ್ಥಿರವಾಗಿದೆ. ಕೇಂದ್ರ ಸರ್ಕಾರ ನೀಡಿರುವ ಅನುದಾನದಲ್ಲಿ ನೆರೆ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಶಾಸಕರು ಹಾಗೂ ಎಂಎಲ್ಸಿಗಳಿಗೆ ಮೂರು ತಿಂಗಳಿಂದ ವೇತನ ನೀಡಿಲ್ಲ ಎಂಬುವುದು ವಿರೋಧ ಪಕ್ಷದವರ ಆರೋಪವಾಗಿದೆ. ನನಗೆ ವೇತನ ಬಂದಿರುವ ಬಗ್ಗೆ ಮಾಹಿತಿ ಇಲ್ಲ. ಈ ಕುರಿತು ಮಾಹಿತಿ ಪಡೆದು ಪ್ರತಿಕ್ರಿಯಿಸುವೆ ಎಂದರು.
ನಗರದ ವಿಮ್ಸ್ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ನೀಡದ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ. ಉತ್ತರ ಪ್ರದೇಶ, ಬಿಹಾರದಲ್ಲಿ ನಡೆಯುತ್ತಿದ್ದ ಘಟನೆ ನಗರದಲ್ಲಿ ನಡೆದಿದೆ. ಯಾರೇ ತಪ್ಪಿತಸ್ಥರಾಗಿದ್ದರೂ ಕ್ರಮಕೈಗೊಳ್ಳಲಾಗುವುದು. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆ ಇರುವುದನ್ನು ಗಮನಿಸಿದ್ದೇನೆ. ಬೆಡ್‌ಗಳ ಕೊರತೆ ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು
| ಬಿ.ಶ್ರೀರಾಮುಲು ಆರೋಗ್ಯ ಸಚಿವ