ನಾಗಮೋಹನ್ ದಾಸ್ ವರದಿ ಹಿಂಪಡೆಯಲಿ

Published on

ಬಳ್ಳಾರಿ : ಪರಿಶಿಷ್ಟ ಜಾತಿ ಒಳ ಮೀಸಲಾತಿಯಲ್ಲಾದ ಅನ್ಯಾಯ ಸರಿಪಡಿಸಲು ಆಗ್ರಹಿಸಿ, ಪರಿಶಿಷ್ಟ ಜಾತಿ ಮೀಸಲಾತಿ ಸಂರಕ್ಷಣಾ ಒಕ್ಕೂಟ (ಕೊರಚ, ಕೊರಮ, ಲಂಬಾಣಿ , ಬೋವಿ) ಸಮಾಜದಿಂದ ಇಲ್ಲಿನ ಕನಕ ದುರ್ಗಮ್ಮ ವೃತ್ತದಿಂದ ಡಿಸಿ ಕಚೇರಿಯವರೆಗೆ ರ‌್ಯಾಲಿ ನಡೆಸಿ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವೈಜ್ಞಾನಿಕವಾಗಿ ವರ್ಗಿಕರಣ ಮಾಡಿ ರಾಜ್ಯ ಸರ್ಕಾರ ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಕ್ಕೆ ಅನ್ಯಾಯ ಎಸಗಿದೆ. ಅಲ್ಲದೆ, ರಾಜ್ಯದಲ್ಲಿ ಗೋರ ಬಂಜಾರ ಲಂಬಾಣಿ ಸಮುದಾಯದ ಒಟ್ಟು ಜನಸಂಖ್ಯೆಯ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ಸಂಪೂರ್ಣವಾಗಿ ಅಧ್ಯಯನ ಮಾಡದೆ ವಾಸ್ತವಿಕ ಸ್ಥಿತಿಗತಿ ಮಾಹಿತಿ ಪಡೆಯದೆ, ಇದರ ಸಾಧಕ ಬಾಧಕಗಳನ್ನು ಗೋರ ಬಂಜಾರ ಸಮಾಜ ಸಂಘಟನೆಗಳ ಉಪಸ್ಥಿತಿಯಲ್ಲಿ ವಿಸ್ತಾರವಾಗಿ ಚರ್ಚಿಸದೆ ಏಕಾಏಕಿಯಾಗಿ ಒಳ ಮೀಸಲಾತಿಯನ್ನು ಜಾರಿ ಮಾಡಿರುವುದು ಕೊಲಂಬೋ ಸಮುದಾಯಗಳಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ.

ಆದ್ದರಿಂದ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ನಾಗಮೋಹನ್ ದಾಸ್ ವರದಿಯನ್ನು ಹಿಂಪಡೆಯಬೇಕು. ಜಾತಿವಾರು ಸಾಮಾಜಿಕ ಶೈಕ್ಷಣಿಕ ವರದಿ ಪುನಃ ಕೈಗೊಳ್ಳಬೇಕು. ಜಾತಿವಾರು ನಿರ್ದಿಷ್ಟ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಗಳ ಕೊಲಂಬೋ ಸಮುದಾಯಕ್ಕೆ ಶೇ. 7ರಷ್ಟು ಒಳ ಮೀಸಲಾತಿ ನೀಡಬೇಕು. ರಾಜ್ಯ ಸರ್ಕಾರ ಈಗಾಗಲೇ ಹೊರಡಿಸಿರುವ ಎಲ್ಲ ಉದ್ಯೋಗ ಮತ್ತು ಬಡ್ತಿಗಳನ್ನು ತಡೆಯಬೇಕು ಎಂದು ಸಂಘಟನಕಾರರು ಒತ್ತಾಯಿಸಿದರು. ಬಳಿಕ ಡಿಸಿ ನಾಗೇಂದ್ರ ಪ್ರಸಾದ್ ಕೆ. ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net