ಬಳ್ಳಾರಿ : ಬೆಳಗಾವಿ ಘಟಕದ ಕೇಂದ್ರ ಜಿಎಸ್‌ಟಿ ಗುಪ್ತಚರ ನಿರ್ದೇಶನಾಯಲಯ (ಡಿಜಿಜಿಐ) ಅಧಿಕಾರಿಗಳು ಜಿಲ್ಲೆಯ ಮೂರು ಸ್ಥಳಗಳಲ್ಲಿ ಶೋಧಿಸಿ ಹಾಗೂ ತನಿಖೆಯಲ್ಲಿ 16 ಕೋಟಿ ರೂ. ಜಿಎಸ್‌ಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ತಪಾಸಣೆಯಲ್ಲಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಹಿವಾಟುಗಳಲ್ಲಿ ತೊಡಗಿರುವ ನಕಲಿ ಕಂಪನಿಗಳ ಅತ್ಯಾಧುನಿಕ ಜಾಲ ಬಹಿರಂಗಪಡಿಸಲಾಗಿದೆ. ಆರೋಪಿಯು ಯಾವುದೇ ಕಾನೂನುಬದ್ಧ ವ್ಯವಹಾರ ಕಾರ್ಯಾಚರಣೆಗಳಿಲ್ಲದೇ ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ, ನಕಲಿ ಇನ್‌ವಾಯ್ಸಗಳು ಮತ್ತು ಇ-ವೇ ಬಿಲ್‌ಗಳನ್ನು ಸೃಷ್ಟಿಸಿದ್ದಾನೆ. ವಹಿವಾಟುಗಳಿಗೆ ಸಂಬಂಧಿಸಿದಂತೆ ಮಾಡಿ ದತ್ತಾಂಶ ವಿಶ್ಲೇಷಣೆಯು ಆರೋಪಿ ನಡೆಸಿದ ಚಟುವಟಕೆಯ ವಂಚನೆಯ ಸ್ವರೂಪದ ಬಗ್ಗೆ ಗಣನೀಯ ಆಧಾರಗಳು ದೊರಕಿವೆ.
ಅಲ್ಲದೇ, ಆರೋಪಿಯು ಶೆಲ್ ಕಂಪನಿಗಳನ್ನು ರಚಿಸುವ ಮತ್ತು ನಿರ್ವಹಿಸುವ ಹಿಂದಿನ ಮಾಸ್ಟರ್ ಮೈಂಡ್ ಆಗಿದ್ದಾನೆ. ಮಾಸ್ಟರ್ ಮೈಂಡ್ ಐಟಿಸಿಯ ಲಾಭ ಪಡೆಯಲು ಮತ್ತು ವರ್ಗಾಯಿಸಲು ಯಾವುದೇ ನಿಜವಾದ ವ್ಯವಹಾರ ಚಟುವಟಿಕೆಗಳಿಲ್ಲಿದೆ ಶೆಲ್ ಕಂಪನಿಗಳನ್ನು ಪ್ರಾರಂಭಿಸಿದ್ದಾನೆ. ವ್ಯವಹಾರದ ಪ್ರಧಾನ ಸ್ಥಳದಲ್ಲಿ ಶೋಧ ವೇಳೆ ನಕಲಿ ಇನ್‌ವಾಯ್ಸ, ನಕಲಿ ಬಾಡಿಗೆ ಒಪ್ಪಂದ, ಲೆಟರ್ ಹೆಡ್ ಹಾಗೂ ದಾಖಲೆಗಳು ಪತ್ತೆಯಾಗಿವೆ. ಇವುಗಳಲ್ಲದೆ ವಂಚನೆ ಚಟುವಟಿಕೆ ನಡೆಸಲು ತನ್ನ ಉದ್ಯೋಗಿಗಳ ಆಧಾರ್, ಪ್ಯಾನ್ ಸೇರಿದಂತೆ ವೈಯಕ್ತಿಕ ದಾಖಲೆಗಳ ಬಳಸಿಕೊಂಡಿರುವ ಕಂಡುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ತನಿಖೆ ನಡೆಯುತ್ತಿದೆ.
ಕಳೆದ ನಾಲ್ಕು ದಿನದ ಹಿಂದೆ ಕೇಂದ್ರ ಜಿಎಸ್‌ಟಿ ಆರು ಅಧಿಕಾರಿಗಳ ತಂಡ ಜಿಲ್ಲೆ ಹಾಗೂ ಹೊಸಪೇಟೆ ಸೇರಿದಂತೆ ವಿವಿಧಡೆ ದಾಳಿ ನಡೆಸಲಾಗಿದೆ. ಆರೋಪಿಯು ಹೊಸಪೇಟೆ ನಿವಾಸಿಯಾಗಿದ್ದು ಅಲ್ಲಿಯೇ ಬಂಧಿಸಿ, ಬೆಳಗಾವಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ, ಆರೋಪಿಯನ್ನು ಹದಿನಾಲ್ಕು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸ್ಥಳೀಯ ಜಿಎಸ್‌ಟಿ ಅಧಿಕಾರಿಯೊಬ್ಬರು ತಿಳಿಸಿದರು. ದಾಳಿ ನಡೆದಿರುವ ಬಗ್ಗೆ ಬಳ್ಳಾರಿ ಎಸ್ಪಿ ಡಾ.ವಿ.ಜೆ.ಶೋಭಾರಾಣಿ ಅವರಿಗೂ ಮಾಹಿತಿಲ್ಲ ಎಂಬುದಾಗಿ ತಿಳಿಸಿದರು.
===