ಅಧ್ಯಕ್ಷರ ವಿರುದ್ಧ ನಿರ್ದೇಶಕರಿಂದ ಅವಿಶ್ವಾಸ ಮಂಡನೆ

Published on

ಬಳ್ಳಾರಿ : ಇಲ್ಲಿನ ಬಳ್ಳಾರಿ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ನಿಯಮಿತ (ಜನತಾ ಬಜಾರ್)ದ ಅಧ್ಯಕ್ಷ ಜಿ.ನೀಲಕಂಠಪ್ಪ ವಿರುದ್ಧ ಅವಿಶ್ವಾಸ ಮಂಡಿಸಿರುವ ಸಂಘದ ನಿರ್ದೇಶಕರು, ಈ ಕುರಿತ ಪತ್ರವನ್ನು ಪ್ರಧಾನ ವ್ಯವಸ್ಥಾಪಕರಿಗೆ ಸಲ್ಲಿಸಿದ್ದಾರೆ.

ಬಳ್ಳಾರಿಯ ಜನತಾ ಬಜಾರ್ ಅಧ್ಯಕ್ಷರಾಗಿರುವ ಜಿ.ನೀಲಕಂಠಪ್ಪ, ಕಳೆದ ಎರಡುವರೆ ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿಲ್ಲ. ಅವರಿಗೆ ಇಚ್ಛೆಬಂದಂತೆ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಸದಸ್ಯರ ಗಮನಕ್ಕೆ ತರದೇ ಸ್ವಂತ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿ.ನೀಲಕಂಠಪ್ಪ ವಿರುದ್ಧ ಸಂಘದ ಉಪನಿಯಮ ಸಂಖ್ಯೆ: 40ರ ಅನ್ವಯ ಅವಿಶ್ವಾಸ ಮಂಡನೆ ಮಾಡಲು ಈ ಕೆಳಗೆ ಸಹಿ ಮಾಡಿರುವ ನಾವುಗಳು ನಮ್ಮ ಅಭಿಪ್ರಾಯಗಳನ್ನು ಪತ್ರದಲ್ಲಿ ತಿಳಿಸಿದ್ದೇವೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ನಿರ್ದೇಶಕರ ಮನವಿ ಪತ್ರವನ್ನು ಸ್ವೀಕರಿಸಿರುವ ಪ್ರಧಾನ ವ್ಯವಸ್ಥಾಪಕರು, ಕಲಬುರ್ಗಿ ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಪತ್ರಬರೆದು ಮುಂದಿನ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.

ಈ ವೇಳೆ ಉಪಾಧ್ಯಕ್ಷೆ ನಸೀಮಾ ಬೇಗಂ, ನಿರ್ದೇಶಕರಾದ ನರೇಶ ಕುಮಾರ, ಮುಜಾಯಿದ್, ಕೇದಾರ್, ಪಲ್ಲೇದ ಮೈತ್ರೇಯಿ, ದಾನಾರೆಡ್ಡಿ, ಪ್ರದೀಪ್‌ರೆಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net