ಬಳ್ಳಾರಿ : ಅಮ್ಮ ಎಲ್ಲಿರುವೆಯಮ್ಮ, ಹಾಲು ಕೊಡಮ್ಮ ಹಸಿವು ತಾಳಲಾಗುತ್ತಿಲ್ಲ.....!
ಹೌದು, ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಮೃತ ಪಟ್ಟ ಐವರು ಬಾಣಂತಿಯರ ಮಡಿಲ್ಲಲ್ಲಿ ಜನಿಸಿದ ಕಂದಮ್ಮಗಳು ಬಿಟ್ಟು ಬಿಡದೇ ಅಳುತ್ತಿರುವುದು ಕರುಳು ಚುರ್ ಎನ್ನುವಂತಿದೆ.
ಅಲ್ಲದೆ, ಆ ಶಿಶುಗಳ ಆಕ್ರಂದನದ ಭಾವಾರ್ಥ ಈ ಮೇಲಿನ ಪದಗಳಂತೆ ಮೃತ ಬಾಣಂತಿಯರ ಮನೆಗಳಿಗೆ ಶನಿವಾರ ಭೇಟಿ ನೀಡಿದಾಗ ಕಂಡು ಬಂತು.
ಜನ್ಮ ತಾಳಿದ ಗಂಟೆಯೊಳಗೆ ಮಗುವಿಗೆ ತಾಯಿಯ ಹಾಲು ಕೊಡಿ ಎನ್ನುತ್ತಾರೆ ವೈದ್ಯರು. ಅಂದರೇ ಅತ್ಯಂತ ಮೌಲ್ಯ, ಶಕ್ತಿಯುತ ತಾಯಿ ಹಾಲು ನವಜಾತ ಶಿಶುಗಳಿಗೆ ಪೂರಕ ಎನ್ನುವುದು ವೈದ್ಯರ ಅಭಿಲಾಷೆ. ಆದರೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರಿಗೆ ಶಿಕ್ಷೆ ಎಂಬಂತೆ ಮಾಡದ ತಪ್ಪಿಗೆ ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಮಗು ಜನಿಸಿದ ಬಳಿಕ ಬಾಣಂತಿಯರು ಮರಳಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಮೃತ ಬಾಣಂತಿಯರ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದ್ದು, ಪರಿಸ್ಥಿತಿ ಶೋಚನೀಯವಾಗಿದೆ.
ಒಂಬತ್ತು ತಿಂಗಳ ಗರ್ಭಿಣಿಯಾದರೂ ಮನೆಯ ಎಲ್ಲ ಕೆಲಸ ಮುಗಿಸಿ ಆಸ್ಪತ್ರೆಗೆ ತಪಾಸಣೆಗೆ ಬೈಕ್ ಹತ್ತಿ ಗಂಡನ ಜತೆ ಹೋದವಳು ಮತ್ತೆ ಮರಳಿ ಮನೆಗೆ ಬಂದಿದ್ದು ಹೆಣವಾಗಿ ಎಂದು ಮೃತ ಬಾಣಂತಿ ಕಮ್ಮರಿ ಲಲಿತಾ ಅವರ ಅತ್ತೆ ರುದ್ರಮ್ಮ ನವಜಾತ ಶಿಶುವಿನ ತೊಟ್ಟಿಲು ತೂಗುತ್ತ ಕಣ್ಣೀರು ಹಾಕುತ್ತಿದ್ದರೇ ನೆರೆದಿದ್ದವರು ಕಣ್ಣಿರಾದರು.
ಮೃತ ಐವರು ಬಾಣಂತಿಯರಲ್ಲಿ ಒಬ್ಬರಾದ ತಾಲೂಕಿನ ಬಸರಕೋಡು ಗ್ರಾಮದ ಮಂಜುನಾಥ ಪತ್ನಿ, ಮೃತ ಬಾಣಂತಿ ಲಲಿತಾ ಪ್ರತಿ ತಿಂಗಳ ತಪಾಸಣೆಯಂತೆ ತಾಲೂಕಿನ ಮೋಕಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು. ವೈದ್ಯರು ಬಿಪಿ ಹೆಚ್ಚಿದೆ ಜಿಲ್ಲಾಸ್ಪತ್ರೆಗೆ ಒಮ್ಮೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದಿದ್ದಾರೆ. ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಲಲಿತಾಳಿಗೆ ಮಗುವಿನ ಹೃದಯದ ಬಡಿತ ಕಡಿಮೆಯಿದ್ದು ಸಿಸೇರಿಯೇನ್ ಮಾಡಬೇಕಾದ ಅಗತ್ಯವಿದೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಆರಂಭದಲ್ಲಿ ಸಿಸೇರಿಯನ್ ಬೇಡ ನಾರ್ಮಲ್ ಹೆರಿಗೆಗೆ ಪ್ರಯತ್ನಿಸಿ ಎಂದು ಮಗು ತಂದೆ ಮಂಜುನಾಥ ಹಠ ಹಿಡಿದಿದ್ದಾರೆ. ಆದರೆ, ಎಂಟು ವರ್ಷಗಳ ಬಳಿಕ ಗರ್ಭಿಣಿಯಾಗಿರುವುದರಿಂದ ನಾರ್ಮಲ್ ಹೆರಿಗೆಗೆ ಪ್ರಯತ್ನಿಸಿದರೆ ತಾಯಿ ಹಾಗೂ ಮಗುವಿಗೆ ಅಪಾಯ ಕಾಡಲಿದೆ ಎಂದು ವೈದ್ಯರು ತಿಳಿಸಿದ ಪರಿಣಾಮ ಸಿಸೇರಿಯನ್‌ಗೆ ಪತಿ ಹಾಗೂ ಕುಟುಂಬಸ್ಥರು ಒಪ್ಪಿದ್ದಾರೆ.
ಬೆಳಗಿನ ಜಾವ ಸಿಸೇರಿಯನ್ ಶಸ್ತ್ರಚಿಕಿತ್ಸೆ ಬಳಿಕ ಲಲಿತಾ ಗಂಡು ಮಗುವಿಗೆ ಜನ್ಮ ನೀಡಿದ ಖುಷಿಯಲ್ಲಿ ಇದ್ದಳು. ನಂತರ ಗ್ಲೋಕೂಸ್ ಹಾಕಿದ ಕೆಲವೇ ನಿಮಿಷಗಳಲ್ಲಿ ದೇಹ ಉರಿಯುತ್ತೆ ಎಂದು ಲಲಿತಾ ಕಿರುಚಿದಳು. ಬಳಿಕ ಗಾಬರಿಯಿಂದ ನನ್ನ ಮಗ ಮಂಜುನಾಥನನ್ನು ಕರೆಯಲು ಹೊರಗಡೆ ಹೋಗಿ ಒಳ ಬರುವ ವೇಳೆಗಾಗಲೇ ಲಲಿತಾ ಸುತ್ತಲೂ ಜನರು ಸೇರಿದ್ದರು. ಕಿಡ್ನಿ ಹಾಗೂ ಬಹು ಅಂಗಾಂಗ ವೈಫಲ್ಯ ಸಮಸ್ಯೆಯಿದೆ ಎಂದು ವೈದ್ಯರು ತಿಳಿಸಿ ಐಸಿಯು ಒಳಗಡೆ ಕರೆದುಕೊಂಡು ಹೋದರು. ಆದರೆ, ಅಲ್ಲಿಗೆ ಹೋದವಳು ಮರಳಿ ಬರಲಿಲ್ಲ. ಮಗು ಜನ್ಮಿಸಿ ಇಂದಿಗೆ 26 ದಿನಗಳ ಕಳೆದಿವೆ, ಹುಟ್ಟಿದ ವೇಳೆ ಮೂರವರೆ ಕೆ.ಜಿ. ಗಿಂತಲೂ ತೂಕವಿತ್ತು. ಕಳೆದ ನಾಲ್ಕೈದು ದಿನಗಳಿಂದ ತಾಯಿ ಹಾಲು ಇಲ್ಲದೆ ಒಂದೇ ರೀತಿ ಅಳುವುದರಿಂದ ಕರುಳು ಕಿತ್ತು ಬರುತ್ತೆ. ಜಿಲ್ಲಾ ಆರೋಗ್ಯ ಇಲಾಖೆಯಿಂದ ನೀಡಿರುವ ಹಾಲಿನ ಫೌಡರ್ ನೀಡಿದ್ದು ಮಗುವಿಗೆ ಕುಡಿಸಲಾಗುತ್ತಿದೆ ಎಂದು ಕಣ್ಣಲ್ಲಿ ಬಂದ ನೀರನ್ನು ಸೆರೆಗಿನಿಂದ ಒರೆಸಿಕೊಳ್ಳುತ್ತಾ ರುದ್ರಮ್ಮ ದು:ಖಿತರಾದರು.
ಸಿಸೇರಿಯನ್‌ಯಾದ ನಂತರ ಗಂಡು ಮಗುವಿಗೆ ಜನ್ಮ ನೀಡಿರುವೆ ಎಂಬ ಸಂತಸದಲ್ಲಿ ಪತ್ನಿ ಲಲಿತಾಳನ್ನು ಕಂಡೆ. ನೆರೆಯ ಸಂಬಂಧಿಕರ ಎಲ್ಲರಿಗೂ ಪೋನ್ ಮಾಡಿ ಗಂಡು ಮಗು ಎಂದು ತಿಳಿಸಿದ್ದೆ. ಗ್ಲೋಕೂಸ್ ಹಾಕಿದ ನಂತರ ಆರೋಗ್ಯದಲ್ಲಿ ಏರುಪೇರಾದ ಆದ ಕೂಡಲೇ ಐಸಿಯುಗೆ ಶಿಫ್ಟ್ ಮಾಡಲಾಯಿತು. ಐಸಿಯು ಶಿಫ್ಟ್ ಆದ ಬಳಿಕ ಹೊರಗಡೆ ಚೀಟಿ ಬರೆದುಕೊಟ್ಟ ಔಷಧಿ ಸ್ಕಾೃನಿಂಗ್ ರಿಫೋರ್ಟ್ ಸೇರಿದಂತೆ ಇತರೆಗಾಗಿ 50 ಸಾವಿರ ರೂ. ಗೂ ಅಧಿಕ ಖರ್ಚು ಆಯಿತು. ಸರ್ಕಾರಿ ಆಸ್ಪತ್ರೆ ಅಂತಾರೆ ಎಲ್ಲವೂ ಹೊರಗಡೆ ಬರೆದುಕೊಡುತ್ತಾರೆ. ಪತ್ನಿ ತೀರಿಕೊಂಡ ಹೋದ ಮೇಲೆ ನನಗೂ ಬದುಕುವ ಆಸೆ ಸತ್ತು ಹೋಗಿತ್ತು. ಆದರೆ, ತಾಯಿ ಇಲ್ಲದ ಎರಡು ಮಕ್ಕಳನ್ನು ಅನಾಥ ಮಾಡುವ ಮನಸ್ಸು ಬರಲಿಲ್ಲ ಎಂದು ಲಲಿತಾ ಪತಿ ಮಂಜುನಾಥ ಹೇಳಿದರು.
ನಿತ್ಯ ನೆನೆಸಿಕೊಂಡು ಕಣ್ಣಿರು ಬತ್ತಿ ಹೋಗಿವೆ, ಕಣ್ಣಲ್ಲಿ ಕಣ್ಣೀರು ಇಲ್ಲವೇ ಇಲ್ಲ. ಆದರೆ, ಮಗಳ ಪೋಟೋ ನೋಡಿದರೆ ಕಣ್ಣೀರು ನಿಲ್ಲುತಿಲ್ಲ ಎಂದು ತಾಲೂಕಿನ ಡಾಣಾಪುರ ಗ್ರಾಮದ ಮೃತ ಬಾಣಂತಿ ನಂದಿನಿ ತಾಯಿ ರಾಮಲಿಂಗಮ್ಮ ಮಗಳ ನೆನೆದು ಕಣ್ಣೀರು ಸುರಿಸಿದರು. ಹೆರಿಗೆಗೆ ಇನ್ನೂ ಹದಿನೈದು ದಿನಗಳು ಸಮಯವಿದ್ದರಿಂದ ಗರ್ಭಿಣಿ ತಪಾಸಣೆಗೆ ಗಂಡನ ಜತೆ ಜಿಲ್ಲಾಸ್ಪತ್ರೆಗೆ ಹೋದಳು. ಬಿಪಿ ಹೆಚ್ಚಿದ್ದು ಸಿಸೇರಿಯನ್ ಮಾಡಬೇಕು ಎಂಬುದಾಗಿ ವೈದ್ಯರು ತಿಳಿಸಿದ ಕೂಡಲೇ ಆಸ್ಪತ್ರೆಯಿಂದ ಹೊರಬಂದು ಸಿಸೇರಿಯನ್ ಬೇಡ ಅಮ್ಮ ಎಂದು ಹೊರಬಂದಿದ್ದಳು. ಮನವೋಲಿಸಿ ಒಳಗಡೆ ಕಳುಹಿಸಿದ್ದರಿಂದ ಶವವಾದಳು ಎಂದು ದು:ಖಿಸಿ ಗಳಗಳನೆ ಅಳಲಾರಂಭಿಸಿದರು.
ಮೃತ ನಂದಿನಿ ತಂದೆ ದೊಡ್ಡಬಸಪ್ಪ ಮಾತನಾಡಿ, ಮಗಳ ನೋವಿನಲ್ಲಿಯೇ ಅನ್ನ, ನೀರು ಬಿಟ್ಟು ನನ್ನ ಪತ್ನಿ ಹಾಸಿಗೆ ಸೇರಿದ್ದಾಳೆ. ಕಳೆದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹುಟ್ಟೂರಲ್ಲಿ ಇದ್ದರೆ ಮಗಳ ನೆನೆಪು ಪದೇ ಪದೇ ಕಾಡುತ್ತದೆ ಎಂದು ತವರು ಮನೆಗೆ ಕರೆದುಕೊಂಡು ಬಂದಿರುವೆ. ಇಲ್ಲಿಯೂ ಕೂಡ ಅವಳ ನೆನೆಪಿನಲ್ಲಿಯೇ ಕೊರಗುತ್ತಿದ್ದಾಳೆ. ಇತ್ತ ಮಗಳ ಸಾವು, ಮಗಳಿಗೆ ಹುಟ್ಟಿದ ಈ ಶಿಶುವನ್ನು ಯಾವ ರೀತಿ ಪೋಷಣೆ ಮಾಡಬೇಕೆನ್ನುವುದು ದಿಕ್ಕು ತಿಳಿಯುತ್ತಿಲ್ಲ ಎಂದು ಗದ್ಗದಿತರಾದರು.