ಬಳ್ಳಾರಿ : ದೇಶದಲ್ಲಿ ಬಿಜೆಪಿ ಆಡಳಿತವಹಿಸಿಕೊಂಡ ನಂತರ ರೈಲ್ವೆ ಇಲಾಖೆಯಲ್ಲಿ ಕ್ರಾಂತಿಕಾರ ಅಭಿವೃದ್ಧಿ ನಡೆದಿವೆ. ಕಡಿಮೆ ಅವಧಿಯಲ್ಲಿ ರಾಜ್ಯ ಸೇರಿ ಹಲವು ಕಡೆಗಳಲ್ಲಿ ಹೆಚ್ಚಿನ ರೈಲುಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ರೈಲು ನಿಲ್ದಾಣಕ್ಕೆ ಶುಕ್ರವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನರೇಂದ್ರ ಮೋದಿ ಅವರ ಕನಸಿನಂತೆ ರೈಲ್ವೆ ಇಲಾಖೆಯಿಂದ ಕ್ರಾಂತಿಕಾರ ಕೆಲಸಗಳು ಆಗುತ್ತಿವೆ. 10 ವಂದೇ ಭಾರತ ರೈಲು ಓಡಿಸಲಾಗುತ್ತಿದೆ. ಇನ್ನು ಹೆಚ್ಚು ಮಾಡಲಾಗುತ್ತಿದ್ದು, ಸ್ಲೀಪರ್ ವಂದೇಭಾರತ ರೈಲು ಶೀಘ್ರ ಆರಂಭಿಸಲಾಗುತ್ತದೆ ಎಂದರು.
ಯುಪಿಎ ಸರ್ಕಾರದಲ್ಲಿ ನೆನೆಗುದಿಗೆ ಬಿದ್ದ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಯುಪಿಎ ಅವಧಿಯಲ್ಲಿ ಕೇವಲ 3300 ಕೆಳ, ಮೇಲ್ಸ ಸೇತುವೆಗಳನ್ನು ನಿರ್ಮಾಣ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 6600 ಕ್ಕೂ ಹೆಚ್ಚು ಮೇಲ ಸೇತುವೆಗಳನ್ನು ನಿರ್ಮಿಸಲಾಗಿದೆ. ಇದರಿಂದ ಬಹುತೇಕ ರೈಲ್ವೆ ಸಮಸ್ಯೆಗಳು ಮುಗಿಯುತ್ತಿವೆ. ಚಿಕ್ಕಮಗಳೂರು ತಿರುಪತಿ ಹೊಸ ರೈಲು ಉದ್ಘಾಟನೆ ಮಾಡಲಾಗಿದೆ. ನಾಲ್ಕೈದು ಹೊಸ ರೈಲುಗಳನ್ನ ರಾಜ್ಯದಲ್ಲಿ ಈಗ ಓಡಿಸಲಾಗುತ್ತಿದೆ ಎಂದು ತಿಳಿಸಿದರು.
ಚಿಕ್ಕಜಾಜೂರು-ಬಳ್ಳಾರಿ ರೈಲ್ವೆ ಡಬಲಿಂಗ್ ಕಾಮಗಾರಿ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿತ್ತು. ಇದಕ್ಕಾಗಿ ಕೇಂದ್ರ ಸರ್ಕಾರ 3300 ಕೋಟಿ ರೂ. ನೀಡಲಾಗಿದೆ. ಕೆಲಸವೂ ಆರಂಭವಾಗಲಿದೆ. ಅಮೃತ ಸ್ಟೇಷನ್ ಯೋಜನೆಯಡಿ ಹಲವು ಕಡೆಗಳಲ್ಲಿ ರೈಲ್ವೇ ಸ್ಟೇಷನ್‌ಗಳ ಆಧುನೀಕರಣ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಜಿಲ್ಲೆಯ ಸುತ್ತ 40 ಕಿ.ಮೀ. ಎಲ್ಲೂ ಕೂಡ ರೈಲ್ವೆ ಹಳಿ ಕ್ರಾಸ್‌ಗಳು ಇರದಂತೆ ಎಲ್ಲ ಕಡೆಗೂ ಎಲ್‌ಒಬಿ, ಆರ್‌ಒಬಿಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತದೆ. ಶೀಘ್ರವೇ ಈ ಬಗ್ಗೆ ಆದೇಶ ಹೊರಡಿಸಿ ಸರ್ವೆ ಮಾಡಲು ಸೂಚಿಸುವೆ ಎಂದರು.