ಬಳ್ಳಾರಿಗೆ ಮೊಳಕಾಲ್ಮೂರು ಸೇರ್ಪಡೆ ಬೇಡ: ಹೈಕ ಹೋರಾಟ ಸಮಿತಿ ಮುಖಂಡರ ಒತ್ತಾಯ

S Pannaraj, TG Vittal
ಎಸ್.ಪನ್ನರಾಜ್ ಹಾಗೂ ಟಿ.ಜಿ.ವಿಠಲ್.
Published on

ಬಳ್ಳಾರಿ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಬಾರದು. ಮೊಳಕಾಲ್ಮೂರು ಸೇರ್ಪಡೆಂದ ಪ್ರಾದೇಶಿಕ ಭಿನ್ನತೆ ಸಮಸ್ಯೆ ಎದುರಾಗಲಿದೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಜಿಲ್ಲಾ ಸಂಚಾಲಕರಾದ ಎಸ್.ಪನ್ನರಾಜ ಹಾಗೂ ಟಿ.ಜಿ.ವಿಠಲ್ ಹೇಳಿದರು.

ಕಲಂ 371 ಜೆ ವ್ಯಾಪ್ತಿಗೆ ವಿಜಯಪುರ ಹಾಗೂ ಗದಗ ಜಿಲ್ಲೆ ರೋಣ ತಾಲೂಕಿನ 60 ಗ್ರಾಮಗಳನ್ನು ಕೊಪ್ಪಳ ಜಿಲ್ಲೆಗೆ ಸೇರ್ಪಡೆ ಮಾಡಲು ಮುಂದಾದಾಗ ವಿರೋಧ ವ್ಯಕ್ತಪಡಿಸಲಾಗಿತ್ತು. ಅದೇ ರೀತಿ ಮೊಳಕಾಲ್ಮೂರು ತಾಲೂಕು ಸೇರ್ಪಡೆಯೂ ಬೇಡ. ಡಾ.ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಯೋಜನೆ ರೂಪಿಸಿ ಕಲಂ 371 ಜೆ ಮಾದರಿಯ ಸೌಲಭ್ಯಗಳನ್ನು ನೀಡಬೇಕೆಂದು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಜಿಲ್ಲೆ ವಿಭಜನೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಹೊಸ ತಾಲೂಕುಗಳಲ್ಲಿ ಇನ್ನೂ ಪೂರ್ಣ ಪ್ರಮಾಣದ ಆಡಳಿತ ವ್ಯವಸ್ಥೆ ಜಾರಿಯಾಗಿಲ್ಲ. ಹೊಸ ಜಿಲ್ಲೆ ರಚನೆ ಮೂಲಕ ಜನರಿಗೆ ದ್ರೋಹ ಎಸಗಲಾಗುತ್ತಿದೆ. ನೂತನ ವಿಜಯನಗರ ಜಿಲ್ಲೆಗೆ 371 ಜೆ ಸೌಲಭ್ಯಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕವಾಗಿ ತಾಂತ್ರಿಕ ಸಮಸ್ಯೆಯೂ ಎದುರಾಗಬಹುದು. ವಿಶೇಷ ಸೌಲಭ್ಯ ಮುಂದುವರಿಯಲು ಸಾಂವಿಧಾನಿಕ ತಿದ್ದುಪಡಿಯ ಅಗತ್ಯ ಇದೆ. ಆದರೆ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಮಸ್ಯೆಯಾಗುವುದಿಲ್ಲ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೌಖಿಕವಾಗಿ ತಿಳಿಸಿದ್ದಾರಂತೆ.

ಈ ಕುರಿತ ಮಾಹಿತಿಯನ್ನು ಸರ್ಕಾರದಿಂದ ಲಿಖಿತ ರೂಪದಲ್ಲಿ ಪಡೆಯಬೇಕು. ಅವಿಭಜಿತ ಜಿಲ್ಲೆಯ ಎಲ್ಲರಿಗೂ ನ್ಯಾಯಯುತವಾಗಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಸೌಲಭ್ಯ ಸಿಗಬೇಕೆಂದು ಪನ್ನರಾಜ ಹಾಗೂ ಟಿ.ಜಿ.ವಿಠಲ್ ಹೇಳಿದರು. ಸಮಿತಿ ಸಂಚಾಲಕ ರಿಜ್ವಾನ್ ಖಾನ್, ಜಿಪಂ ಸದಸ್ಯ ಎ.ಮಾನಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net