ಬಳ್ಳಾರಿ : ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಬೇಜವಾಬ್ದಾರಿ ಧೋರಣೆ ತಾಳಿದ್ದಾರೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಘಟಕದ ಉಪಾಧ್ಯಕ್ಷ ಎಸ್.ಗುರುಗಲಿಂಗನಗೌಡ ಪತ್ರಿಕಾ ಪ್ರಕಟಣೆ ಮೂಲಕ ಆರೋಪಿಸಿದರು.
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿಯಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿದ್ದಲ್ಲದೆ ರೈತರಿಗೆ ದ್ರೋಹ ಎಸಗಿದೆ. ಆ ಮೂಲಕ ರೈತರ ಬೆಳೆಗಳು ನಷ್ಟ ಹೊಂದಿದಲ್ಲಿ ಪ್ರತಿ ಎಕರೆಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ಧನ ನೀಡಬೇಕೆಂದು ತಾಕೀತು ಮಾಡಿದ್ದಾರೆ. ಸರ್ಕಾರದ ಒಬ್ಬ ಜವಾಬ್ದಾರಿಯುತ ಸಚಿವರಾಗಿ ತಂಗಡಗಿ ಬೇಜವಾಬ್ದಾರಿ ಮತ್ತು ಬಾಲಿಶ ಹೇಳಿಕೆಗಳನ್ನು ನೀಡಿ ರೈತರಲ್ಲಿ ಆತಂಕ ಸೃಷ್ಟಿಸುವುದನ್ನು ತಕ್ಷಣವೇ ನಿಲ್ಲಿಸಬೇಕು. ಸುಳ್ಳು ಹೇಳಿ ಅಧಿಕಾರ ಪಡೆದ ನೀವು, ಆಡಳಿತದಲ್ಲೂ ಸುಳ್ಳು ಹೇಳಿ ರೈತರು ಮತ್ತು ಕೂಲಿಕಾರರ ಬದುಕನ್ನು ಬೀದಿಪಾಲು ಮಾಡಬೇಡಿ ಎಂದು ಕಿಡಿ ಕಾರಿದ್ದಾರೆ.
ತುಂಗಭದ್ರಾ ಜಲಾಶಯದ ತಜ್ಞರ ಸಲಹೆ ಪಡೆದು ಕೂಡಲೇ ಮುಂದಿನ ಹಂಗಾಮು ಮುಗಿದ ನಂತರ, ಪ್ರತಿ ಗುತ್ತಿಗೆದಾರನಿಗೆ ಮೂರು ಗೇಟ್‌ಗಳಂತೆ ನೀಡಿ, ಮೂರು ತಿಂಗಳ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ. ಇದರಿಂದ ರೈತರಿಗೆ ಎರಡು ಬೆಳೆಗಳೂ ಸಿಗುತ್ತವೆ ಮತ್ತು ಜಲಾಶಯದ ಸುರಕ್ಷತೆಯೂ ಖಚಿತವಾಗುತ್ತದೆ. ರೈತರಿಗೆ ನಿರೀಕ್ಷೆಯಂತೆ ಎರಡೂ ಬೆಳೆಗಳೂ ನೀರು ಸಿಗುವಂತೆ ಕ್ರಮ ಕೈಗೊಳ್ಳಬೇಕು. ಜಲಾಶಯಕ್ಕೆ ಯಾವುದೇ ಅಪಾಯ ಎದುರಾಗದಿರುವಂತೆ ತಜ್ಞ ಇಂಜಿನಿಯರ್‌ಗಳ ಸಲಹೆಯಂತೆ ಕ್ರಸ್ಟ್‌ಗೇಟ್‌ಗಳ ಅಳವಡಿಕೆ ಮಾಡಬೇಕೆಂದು ಒತ್ತಾಯಿಸಿದರು.