ಬಳ್ಳಾರಿ : ಬೀದರ್ ಜಿಲ್ಲೆಯ ಬಾಲ್ಕಿಯ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ ಎಂದು ಶಾಸಕ ಜಿ.ಜನಾರ್ದನರೆಡ್ಡಿ ಆಗ್ರಹಿಸಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಆತ್ಮಹತ್ಯೆ ಪ್ರಕರಣವು ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಸುದ್ದಿಯಾಗಿದೆ. ಏಳು ಪುಟಗಳ ಡೆತ್ ನೋಟಿನಲ್ಲಿ ಕಿರುಕುಳದ ಬಗ್ಗೆ ಉಲ್ಲೇಖವಿದೆ. ಮಾನ್ಯ ಸಚಿವರ ಬೆಂಬಲಯಿದೆ ಎಂಬುದಾಗಿ ಅಪ್ತ ರಾಜು ಕಪನೂರ್ ಹೇಳಿದ್ದಾಗಿ ಡೆತ್ ನೋಟಿನಲ್ಲಿ ತಿಳಿಸಲಾಗಿದೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಖರ್ಗೆ ರಾಜೀನಾಮೆ ಪಡೆಯಬೇಕಿತ್ತು. ಸಿಎಂ ಅವರಿಗೆ ಖರ್ಗೆಯ ರಾಜೀನಾಮೆ ಪಡೆಯುವ ಧೈರ್ಯಯಿಲ್ಲ. ತಂದೆ ಎಐಸಿಸಿ ಅಧ್ಯಕ್ಷರಿದ್ದಾರೆ ಎಂಬ ಸೊಕ್ಕು, ದುರಹಂಕಾರ ಖರ್ಗೆಯಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಮನಸ್ಸು ಮಾಡಿದರೇ, ಸಿಎಂ ಸ್ಥಾನವನ್ನು ಕಿತ್ತುಕೊಳ್ಳಬಹುದು ಎನ್ನುವ ಧೈರ್ಯ ಖರ್ಗೆಗೆ ಇದೆ. ಬಿಜೆಪಿಯವರು ಬಟ್ಟೆ ಹರಿದುಕೊಂಡರೂ ರಾಜೀನಾಮೆ ನೀಡಲ್ಲ ಎಂದು ಸೊಕ್ಕಿನ ಮಾತನಾಡುತ್ತಿದ್ದಾರೆ. ಬಿಜೆಪಿಯವರೇನು ಬಟ್ಟೆ ಹರಿದು ಕೊಳ್ಳೋದು ಬೇಕಿಲ್ಲ, ಹೇಗೆ ರಾಜೀನಾಮೆ ತೆಗೆಯಬೇಕು ಎನ್ನುವುದು ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು. ಈ ಆತ್ಮಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿ ಮೃತ ಕುಟುಂಬಸ್ಥರಿಗೆ ನ್ಯಾಯ ಒದಗಿಸಬೇಕು ಎಂದರು.
ಗುತ್ತಿಗೆದಾರ ಸಚಿನ್ ಅವರ ಡೆತ್ ನೋಟ್ ಬಗ್ಗೆ ಗೃಹ ಸಚಿವರು, ಡಿಸಿಎಂ ಬಹಳ ಹಗುರವಾಗಿ ಮಾತನಾಡಿದ್ದಾರೆ. ಜನರು ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಸಿದ್ದಲಿಂಗ ಸ್ವಾಮೀಜಿ, ಮಣಿಕಂಠ ರಾಠೋಡ್, ಚಂದು ಪಾಟೀಲ್, ಬಸವರಾಜ ಮತ್ತು ಮೂಡ್ ಕೊಲೆ ಮಾಡೋದಕ್ಕೆ ಸುಪಾರಿ ಕೊಟ್ಟಿದ್ದಾರೆ. ಗುತ್ತಿಗೆದಾರ ಸಚಿನ್ ಸಹೋದರಿಯರು ಠಾಣೆಗೆ ಹೋಗಿ ದೂರು ನೀಡಿದರೂ, ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡು ಪ್ರಯತ್ನಿಸಿದರೇ ಸಚಿನ್ ಬದುಕುತ್ತಿದ್ದ. ಅವರ ಸಹೋದರಿಯರ ಬಗ್ಗೆಯೇ ಪೊಲೀಸರು ಕೆಟ್ಟದಾಗಿ ಮಾತನಾಡಿ ಕಳಿಸಿದ್ದಾರೆ. ಬೀದರ್, ಕಲಬುರಗಿ ಜಿಲ್ಲೆಯ ಪೊಲೀಸ್ ಠಾಣೆಗಳೆಲ್ಲಾ ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ ಎಂದು ಆರೋಪಿಸಿದರು. ಮುಖಂಡರಾದ, ಗೋನಾಳ್ ರಾಜಶೇಖರಗೌಡ, ಮಲ್ಲೇಶ್, ದಮ್ಮೂರು ಶೇಖರ, ಹನುಮಂತಪ್ಪ ಇದ್ದರು.