

ಚುನಾವಣೆಗೆ ನಾವು ಸಿದ್ಧ
ಬಳ್ಳಾರಿ: ಮಾಜಿ ಸಿಎಂ ಸಿದ್ದರಾಮಯ್ಯ ಪರಿಸ್ಥಿತಿ ತುಘಲಕ್ ರೀತಿ ಆಗಿದೆ. ಅವರು ತಾವೇ ಬುದ್ದಿವಂತರು ಎಂದುಕೊಂಡಿದ್ದಾರೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದರು. ಇತ್ತೀಚೆಗೆ ಸಿದ್ದರಾಮಯ್ಯರಲ್ಲಿ ಆತ್ಮವಿಶ್ವಾಸ ಕುಸಿದಿದ್ದು, ಖಿನ್ನತೆ ಇದ್ದಂತೆ ಕಾಣುತ್ತಿದೆ. ಪಕ್ಷದಲ್ಲಿ ಅವರು ಏಕಾಂಗಿಯಾಗಿದ್ದಾರೆ. ಪಕ್ಷ ತನ್ನನ್ನು ದೂರ ತಳ್ಳುತ್ತಿದೆ ಎಂಬ ಖಿನ್ನತೆಯಲ್ಲಿದ್ದಾರೆ. ರಾಜಕಾರಣಕ್ಕಾಗಿ ಗುರುಪರಂಪರೆಯನ್ನು ಅವಮಾನಿಸಿದ್ದಾರೆ. ಸ್ವಾಮೀಜಿಗಳಿಗಷ್ಟೇ ಅಲ್ಲ, ಹನುಮನ ಬಗ್ಗೆಯೂ ಹೇಳಿಕೆ ನೀಡಿದ್ದರು. ಕೂಡಲೇ ಅವರು ಕ್ಷಮೆಯಾಚಿಸಲಿ ಎಂದರು.
ಬಿಜೆಪಿಯೊಂದಿಗೆ ಕಾಂಗ್ರೆಸಿನ ಹಲವು ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲುವು ಖಚಿತವೆಂದು ನಂಬಿದ್ದಾರೆ. ಹೈಕಮಾಂಡ್ ಗಮನಕ್ಕೂ ಈ ವಿಚಾರ ತರಲಾಗಿದೆ. ಸಂಪುಟ ವಿಸ್ತರಣೆ ಸಂಬಂಧಿಸಿ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಕೋರ್ ಕಮಿಟಿಯಲ್ಲಿ ಚರ್ಚಿಸಿ, ಸಂಪುಟ ವಿಸ್ತರಣೆ ಆಗಲಿದೆ. ನಾವು ಚುನಾವಣೆಗೆ ತಯಾರಾಗಿದ್ದೇವೆ. ಪಂಚ ರಾಜ್ಯಗಳ ಚುನಾವಣೆ ನಂತರ ಕಾಂಗ್ರೆಸ್ ನಾಯಕರ ಪರಿಸ್ಥಿತಿ ಹೀನಾಯವಾಗಿದೆ. 2023ರಲ್ಲಿ ರಾಜ್ಯದಲ್ಲಿ ಬಿಜೆಪಿ 170ಕ್ಕೂ ಹೆಚ್ಚು ಸ್ಥಾನಗಳಿಸುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ. ಬಿ.ಎಸ್.ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ. ಯಾರ ವಿರುದ್ಧವಾದರೂ ನಾನು ಸ್ಪರ್ಧಿಸುವೆ ಎಂದರು.