

ಹೀರಾನಾಯ್ಕ ಟಿ. ಬಳ್ಳಾರಿ
ರಾಜ್ಯ ಸರ್ಕಾರವು ಕ್ಷೀರಸಿರಿ ಯೋಜನೆಯಡಿ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಎಂಟು ತಿಂಗಳಿಂದ ಜಮೆಯಾಗದೆ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆಯ ಹಾಲು ಉತ್ಪಾದಕರು ಸಂಕಷ್ಟಕ್ಕೊಳಗಾಗಿದ್ದಾರೆ.
ಪ್ರೋತ್ಸಾಹ ಧನ 2022ರ ನವೆಂಬರ್‌ನಿಂದ ಸ್ಥಗಿತಗೊಂಡಿದೆ. ಈಗಾಗಲೇ ರಾಸುಗಳ ಚರ್ಮಗಂಟು ರೋಗದಿಂದ ತತ್ತರಿಸಿ ಹೋಗಿರುವ ಹೈನುಗಾರರು ಸಿಗುವ ಕನಿಷ್ಠ ಮೊತ್ತದ ಪ್ರೋತ್ಸಾಹ ಧನವೂ ಸಕಾಲದಲ್ಲಿ ಲಭಿಸದೆ ಚಿಂತಿತರಾಗಿದ್ದಾರೆ.
ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ಕಳೆದ ಅಕ್ಟೋಬರ್‌ನಿಂದ ಪ್ರತಿ ಲೀಟರ್ ಹಾಲಿಗೆ ನೀಡುವ 5 ರೂ. ಪ್ರೋತ್ಸಾಹ ಧನ, ಎಸ್‌ಸಿ/ಎಸ್‌ಟಿ ಸಮುದಾಯದ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಬಾಕಿ ಇದೆ. ಇದರಿಂದಾಗಿ ರೈತರು ಹೈನುಗಾರಿಕೆಯಿಂದ ವಿಮುಖರಾಗುವಂತಾಗಿದೆ.
ಬಳ್ಳಾರಿ ವ್ಯಾಪ್ತಿಯ ಹಾಲು ಒಕ್ಕೂಟಕ್ಕೆ 18 ಕೋಟಿ ರೂ. ಸರ್ಕಾರದಿಂದ ಪ್ರೋತ್ಸಾಹ ಧನ ಬರಬೇಕಾಗಿದ್ದು, ಪ್ರತಿ ತಿಂಗಳು 2.75 ಕೋಟಿ ರೂ. ಪ್ರೋತ್ಸಾಹಧನ ರೈತರಿಗೆ ನೀಡಬೇಕಿದೆ. ಹಾಲು ಉತ್ಪಾದಕರಿಗೆ ಒಕ್ಕೂಟಗಳು ವೈಜ್ಞಾನಿಕವಾಗಿ ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಕ್ಕೂಟಗಳು ನೀಡುವ ಬೆಲೆಯ ಜತೆಗೆ ಪ್ರತೀ ಲೀ.ಗೆ 5 ರೂ. ಪ್ರೋತ್ಸಾಹ ಧನ ನೀಡಲಾರಂಭಿಸಿತ್ತು. ಆದರೆ ಕಾಲಕಾಲಕ್ಕೆ ರೈತರಿಗೆ ತಲುಪಿಸುವಲ್ಲಿ ಸರ್ಕಾರ ಆಸಕ್ತಿ ತೋರದೆ ಇರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ 28 ಸಾವಿರ ಜನರು ಹಾಲು ಉತ್ಪಾದಿಸುತ್ತಿದ್ದಾರೆ. ಪ್ರತಿ ದಿನ 1.72 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಕಳೆದ ಆರು ತಿಂಗಳಿಂದ ಹಾಲಿನ ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ. ಚರ್ಮಗಂಟು ರೋಗದಿಂದಾಗಿ ನಾಲ್ಕು ಜಿಲ್ಲೆಯಲ್ಲಿ ಎಂಟು ಸಾವಿರ ಹಸುಗಳು ಮೃತಪಟ್ಟಿದ್ದು, ಇದರಿಂದ ಹಾಲು ಉತ್ಪಾದನೆಗೆ ಪೆಟ್ಟು ಬಿದ್ದಿದೆ. ಈ ಹಿಂದೆ 1.80 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿತ್ತು. ಈಗ ಅದರ ಪ್ರಮಾಣ ಕಡಿಮೆ ಆಗಿದೆ.
ಒಂದೆಡೆ ರೈತರಿಂದ ಹಾಲು ಖರೀದಿ ದರ ಇಳಿಸುವ ಕುರಿತು ಚರ್ಚೆ ನಡೆದಿದೆ. ಈ ನಡುವೆ ಎಂಟು ತಿಂಗಳ ಹಾಲಿನ ಪ್ರೋತ್ಸಾಹಧನವನ್ನು ಸರ್ಕಾರ ಹೈನುಗಾರರಿಗೆ ನೀಡುವುದು ಬಾಕಿ ಇದೆ. ಹೈನುಗಾರಿಕೆ ಮಾಡುವವರನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರವು ಕರ್ನಾಟಕ ಹಾಲು ಉತ್ಪಾದಕ ಮಹಾಮಂಡಳ ವ್ಯಾಪ್ತಿಗೆ ಬರುವ ಎಲ್ಲ ಸಹಕಾರ ಸಂಘಗಳಿಗೆ ನೀಡುವ ಪ್ರತಿ ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹಧನ ಕೊಡುವ ವ್ಯವಸ್ಥೆಯನ್ನು ಜಾರಿಗೆ ತಂದಿತು.
2013ರಲ್ಲಿ ಅದನ್ನು 4 ರೂ.ಗೆ, 2017ರ ಡಿಸೆಂಬರ್‌ನಿಂದ 5 ರೂ.ಗೆ ಹೆಚ್ಚಿಸಲಾಗಿದೆ. ಈಗ ಮತ್ತೆ 5 ರೂ.ನಿಂದ 7 ರೂ. ವರೆಗೆ ಹೆಚ್ಚುಸುವಂತೆ ಹಾಗೂ ಎಂಆರ್‌ಪಿ ದರ ಕೂಡ 5 ರೂ. ಹೆಚ್ಚಿಸುವಂತೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟಕ್ಕೆ ಕಳೆದ ಸಾಲಿನಲ್ಲಿ ಬಳ್ಳಾರಿಯಲ್ಲಿ ಮೆಗಾ ಡೇರಿ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಇದಕ್ಕಾಗಿ ಅಲ್ಲಂ ಭವನ ಸಮೀಪದಲ್ಲಿರುವ 9.80 ಎಕರೆ ಪ್ರದೇಶವನ್ನು ಗುರುತಿಸಲಾಗಿತ್ತು. ಅದು ಸ್ಥಳಾವಕಾಶ ಸರಿ ಇಲ್ಲ ಎನ್ನುವ ವಿಚಾರವಾಗಿ ಬೇರೆಡೆ ಸ್ಥಳವನ್ನು ನೀಡಬೇಕು.
ಕನಿಷ್ಠ 15 ಎಕರೆ ಪ್ರದೇಶವನ್ನು ನೀಡುವಂತೆ ಸರ್ಕಾರಕ್ಕೆ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಮೆಗಾಡೇರಿಗೆ 100 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಅದರಂತೆ ಈಗಾಗಲೇ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ)ಯಡಿ 80.4 ಕೋಟಿ ರೂ. ಬಿಡುಗಡೆಯಾಗಿದೆ. ಸ್ಥಳಾವಕಾಶ ನೋಡಿ ಡೇರಿ ನಿರ್ಮಾಣ ಮಾಡಲು ಸಿದ್ಧತೆ ನಡೆಯಲಿದೆ ಎಂದು ಒಕ್ಕೂಟದ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.
ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಸಾಮಾನ್ಯವಾಗಿ 3-4 ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಶೀಘ್ರ ಹೈನುಗಾರರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗುವುದು.> ಟಿ.ತಿರುಪತಪ್ಪ, ಕಾರ್ಯನಿರ್ವಾಹಕ ನಿರ್ದೇಶಕ ಬಳ್ಳಾರಿ, ರಾಯಚೂರು, ಕೊಪ್ಪಳ ಹಾಗೂ ವಿಜಯನಗರ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ
ರಾಜ್ಯ ಸರ್ಕಾರ ಎರಡು, ಮೂರು ತಿಂಗಳಿಗೊಮ್ಮೆ ರೈತರ ಬ್ಯಾಂಕ್ ಖಾತೆಗಳಿಗೆ ನೇರ ಡಿಬಿಟಿ ಮೂಲಕ ಪ್ರೋತ್ಸಾಹಧನ ಬಿಡುಗಡೆ ಮಾಡುತ್ತಿತ್ತು. 2022 ನವೆಂಬರ್‌ನಿಂದ ಪ್ರೋತ್ಸಾಹಧನ ನೀಡಿಲ್ಲ. ಚರ್ಮಗಂಟು ರೋಗದಿಂದ ಜಾನುವಾರುಗಳು ಮೃತಪಟ್ಟಿದ್ದು, ಹಾಲಿನ ಇಳುವರಿ ಗಣನೀಯವಾಗಿ ಇಳಿಕೆಯಾಗಿದೆ. ಈ ಎಲ್ಲ ಕಾರಣಗಳಿಂದ ರೈತರು ಹೈನುಗಾರಿಕೆಯಿಂದಲೇ ದೂರವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರೋತ್ಸಾಹಧನ ಬಾಕಿ ರೈತರನ್ನು ಇನ್ನಷ್ಟು ಸಂಕಷ್ಟಕ್ಕೆ ನೂಕಿದೆ.ಪುರುಷೋತ್ತಮಗೌಡ, ರೈತ ಮುಖಂಡ