

ಬಳ್ಳಾರಿ: ಪಾಲಿಕೆ ಚುನಾವಣೆಯಲ್ಲಿ ಯುವಕರಿಗೆ ಅವಕಾಶ ನೀಡುವ ಕುರಿತು ಭಾನುವಾರ ನಡೆಯುವ ಕೋರ್‌ಕಮಿಟಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದರು.
ನಗರದ ಕೆಎಸ್‌ಆರ್ ಫಂಕ್ಷನ್‌ಹಾಲ್‌ನಲ್ಲಿ ಶನಿವಾರ ಬಿಜೆಪಿ ಯುವ ಮೋರ್ಚಾದ ಜಿಲಾ ್ಲಘಟಕ ಹಮ್ಮಿಕೊಂಡಿದ್ದ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ದೇಶದಲ್ಲಿ ಬಿಜೆಪಿ ಗೆಲ್ಲಲು ಪ್ರಮುಖ ರೂವಾರಿಗಳು ಯುವ ಕಾರ್ಯಕರ್ತರು. ಹೀಗಾಗಿ ಆಡಳಿತ ಪಕ್ಷ ನಡೆಸುವ ಪ್ರತಿ ಕಾರ್ಯಕ್ರಮಗಳಲ್ಲಿ ಯುವ ಮೋರ್ಚಾ ಮುಖ್ಯಪಾತ್ರ ವಹಿಸುತ್ತದೆ. ಬಳ್ಳಾರಿ ಜಿಲ್ಲೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿದ್ದು, ಕೇಂದ್ರ ಸರ್ಕಾರ ಭರವಸೆ ನೀಡಿದೆ ಎಂದರು.
ಯುವ ಮೋರ್ಚಾದ ಅಧ್ಯಕ್ಷ ಸಿ.ಸಂದೀಪ್ ಕುಮಾರ್ ಮಾತನಾಡಿ, ಬಿಜೆಪಿ ಸಾಮಾನ್ಯ ಕಾರ್ಯಕರ್ತರನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೊಯುತ್ತದೆ. ಇಂದಿನ ಪಕ್ಷಗಳು ಕುಟುಂಬ ರಾಜಕೀಯದಲ್ಲೇ ಮುಂದುವರಿದಿವೆ. ಆದರೆ, ಬಿಜೆಪಿ ದೇಶದ ಅಭಿವೃದ್ಧಿ ಮಂತ್ರ ಪಠಿಸುತ್ತಿದೆ ಎಂದು ಹೇಳಿದರು. ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಎಲ್ಲ ಪದಾಧಿಕಾರಿಗಳು ಪಾಲಿಕೆ ಚುನಾವಣೆಯಲ್ಲಿ ಯುವ ಮೋರ್ಚಾ ಪವರ್ ತೋರಿಸಬೇಕು ಎಂದು ತಿಳಿಸಿದರು.
ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ, ಜಿಲ್ಲಾ ಪ್ರ.ಕಾರ್ಯದರ್ಶಿ ಅನಿಲ್ ನಾಯ್ಡು, ಡಾ.ರಮೇಶ್, ಯುವ ಮೋರ್ಚಾದ ಜಿಲ್ಲಾ ಅಧ್ಯಕ್ಷ ಸೋಮಶೇಖರಗೌಡ, ಪ್ರ.ಕಾರ್ಯದರ್ಶಿ ಶಂಕರ್ ನವಲಿ, ಮುಖಂಡರಾದ ವೀರಶೇಖರ್ ರೆಡ್ಡಿ, ಶ್ರೀನಿವಾಸ ಮೋತ್ಕರ್ , ಮಂಜುನಾಥಗೌಡ, ವೆಂಕಟೇಶ್, ಡಾ.ಅರುಣಾ, ಯರ‌್ರಿಸ್ವಾಮಿ, ಮಲ್ಲಿಕಾರ್ಜುನ ಬಾಳೆಕಾರ್, ಅಡವಿಸ್ವಾಮಿ ಇತರರಿದ್ದರು.
ದೈಹಿಕ ಅಂತರ, ಮಾಸ್ಕ್ ಇಲ್ಲ: ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಕರೊನಾ ಎರಡನೇ ಅಲೆ ನಿಯಂತ್ರಿಸಲು ಮಾರ್ಗಸೂಚಿ ಹೊರಡಿಸಿದೆ. ಆದರೆ, ಕಾರ್ಯಕಾರಿಣಿಯಲ್ಲಿ ಕಾರ್ಯಕರ್ತರು ಮತ್ತು ಮುಖಂಡರು ಮಾಸ್ಕ್ ಧರಿಸದಿರುವುದು ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡುಬಂತು.