ಬಳ್ಳಾರಿ : ಮನುಷ್ಯ ಆರೋಗ್ಯವಾಗಿ ಜೀವಿಸಲು ಮಾನಸಿಕ ನೆಮ್ಮದಿ ಬಹುಮುಖ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ನ್ಯಾಯಾಂಗ ನೌಕರರ ಸಂಘ ಸಹಯೋಗದೊಂದಿಗೆ ಸದೃಢ ಮನಸ್ಸು-ಸದೃಢ ಜಗತ್ತು ಎಂಬ ಘೋಷವಾಕ್ಯದೊಂದಿಗೆ ಶುಕ್ರವಾರ ಆಯೋಜಿಸಿದ್ದ ಮಾನಸಿಕ ಆರೋಗ್ಯ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಕೃತಿಯಲ್ಲಿನ ಗಾಳಿ, ನದಿ ಸೇರಿದಂತೆ ಪ್ರತಿಯೊಂದಕ್ಕೂ ನಿರ್ದಿಷ್ಟ ದಿಕ್ಕು ಇರುತ್ತದೆ. ಆದರೆ, ಮನುಷ್ಯನ ಮನಸ್ಸು ಮಾತ್ರ ಹತೋಟಿಯಲ್ಲಿರದೆ ವಿವಿಧ ದಿಕ್ಕುಗಳಲ್ಲಿ ಚಲಿಸುತ್ತದೆ. ಹಾಗಾಗಿ ಮನಸನ್ನು ಹರಿಬಿಡದೆ ಹಿಡಿತದಲ್ಲಿ ಇಟ್ಟುಕೊಂಡರೆ ಸದೃಢ ಮಾನಸಿಕ ಆರೋಗ್ಯ ಹೊಂದುತ್ತೇವೆ ಹಾಗೂ ಸಂತೋಷದ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು. ಮನುಷ್ಯನು ಸಣ್ಣ ವಿಚಾರಗಳಿಂದ ಹತಾಶೆಗೊಳ್ಳದೇ, ಕೆಲಸ-ಕಾರ್ಯಗಳ ಒತ್ತಡಗಳನ್ನು ನಿಗ್ರಹಿಸಿಕೊಂಡು ವೈಯಕ್ತಿಕ ಮತ್ತು ವೃತ್ತಿ ಜೀವನ ನಡೆಸಿದಾಗ ಮಾತ್ರ ಮಾನಸಿಕ ಸದೃಢರಾಗುತ್ತಾರೆ ಎಂದು ತಿಳಿಸಿದರು. ಸದೃಢ ದೇಹ ಹೊಂದಲು ವ್ಯಾಯಾಮ, ಕ್ರೀಡಾ ಚಟುವಟಿಕೆಗಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು. ಮಾನಸಿಕವಾಗಿ ಆರೋಗ್ಯವಂತರಾಗಲು ಯೋಗ, ಧ್ಯಾನ, ಮಾಡುವುದರಿಂದ ಆರೋಗ್ಯವಂತರಾಗಿ ಸಕರಾತ್ಮಕ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಮನರೋಗ ತಜ್ಞ ಡಾ.ರೋಹನ್ ವನಗುಂದಿ ಮಾತನಾಡಿ, ವೈಯಕ್ತಿಕ ಜೀವನ, ವೃತ್ತಿ ಜೀವನ, ಕೌಟುಂಬಿಕ ಜೀವನ, ಸಾಮಾಜಿಕ ಜೀವನದಲ್ಲಿ ಎಲ್ಲ ವರ್ಗದ ಜನರಿಗೆ ಒತ್ತಡ ಬರುವುದು ಸಹಜ. ಅದನ್ನು ಸಮತೋಲನ ಭಾವನೆಯಿಂದ ನಿರ್ವಹಿಸಬೇಕು. ಮನುಷ್ಯ ಭಾವನಾತ್ಮಕ ಜೀವಿ. ಭಾವನೆಗಳನ್ನು ಸಮ-ಭಾವದಿಂದ ಸ್ವೀಕರಿಸಿ ಮಾನಸಿಕ ಆರೋಗ್ಯ ಹೊಂದಬೇಕು. ಜನಸಾಮಾನ್ಯರು ದೈಹಿಕವಾಗಿ ಸದೃಢರಾಗಲು ವ್ಯಾಯಾಮ, ಡಯಟ್‌ನಂತಹ ಜೀವನ ಶೈಲಿಗೆ ಮೊರೆಹೋಗುತ್ತಾರೆ ಎಂದರು.