ಬಳ್ಳಾರಿ : ಸಂಡೂರಿನ ಸ್ವಾಮಿಮಲೈ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಉದ್ದೇಶದಿಂದ ಮರಗಳು ಕಡಿಯಲು ಗುರುತು ಮಾಡಿರುವುದು ವಿರೋಧಿಸಿ, ಜನಸಂಗ್ರಾಮ ಪರಿಷತ್ ದಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಕಾಯ್ದೆ ಪ್ರಕಾರ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಯನ್ನು ಅನುಮತಿ ಪಡೆದ ಕಂಪನಿಯು ತನಗೆ ನೀಡಲಾದ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಅಡ್ಡಿ ಬರುವ ಮರಗಳನ್ನು ಎಣಿಕೆ ಮಾಡಿಕೊಡುವಂತೆ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನು ಪರಿಶೀಲನೆ ಮಾಡಲು ಸಂಬಂಧಪಟ್ಟ ಅರಣ್ಯಾಧಿಕಾರಿಗಳಿಗೆ ಮಾಹಿತಿಯನ್ನು ನೀಡುತ್ತಾರೆ. ಮೇಲಧಿಕಾರಿಗಳ ನಿರ್ದೇಶನದಂತೆ ಗಣಿಗಾರಿಕೆ ಮಾಡುವ ಸಲುವಾಗಿ ತೆರವುಗೊಳಿಸಬೇಕಾದ ಮರಗಳನ್ನು ನಂಬರ್ ಸಹಿತ ನಮೂದಿಸಿ ಒಟ್ಟು ಮರಗಳ ಸಂಖ್ಯೆ, ವರ್ಗ, ಅಳತೆ ಸಹಿತವಾದ ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಬೇಕು. ಸಲ್ಲಿಸಿದ ವರದಿಯನ್ನು ಪರಿಶೀಲನೆ ಮಾಡಿ ತೆರವುಗೊಳಿಸಬೇಕಾಗುವ ಮರಗಳ ವೆಚ್ಚವನ್ನು ಭರಿಸುವಂತೆ ಆದೇಶ ಮಾಡಲಾಗುತ್ತಿದೆ. ಗಣಿ ಗುತ್ತಿಗೆದಾರನು ಕಡಿಯಬೇಕಾದ ಮರಗಳ ವೆಚ್ಚವನ್ನು ಭರಿಸಿ ರಸೀದಿ ಪಾವತಿಸಬೇಕಾಗುತ್ತದೆ. ಆ ನಂತರ ಮರಗಳನ್ನು ತೆರವುಗೊಳಿಸಲು ಕೆಐಒಸಿಎಲ್ ಕಂಪನಿಯ ಟೆಂಡರ್ ಕರೆಯಬೇಕಾಗುತ್ತದೆ. ಆದರೆ, ಈ ಎಲ್ಲ ನಿಯಮಗಳು ಪಾಲಿಸದೆ ಏಕಾಏಕಿ ಎಸ್ ಟಿಪಿ ಎಂಟರ್ ಪ್ರೈಸೆಸ್ ಏಜೆನ್ಸಿ ಸಿಬ್ಬಂದಿ ಮರಗಳಿಗೆ ನಂಬರ್ ಪ್ಲೇಟ್ ಹೊಡೆದಿದೆ. ಆದ್ದರಿಂದ, ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಕೆಐಒಸಿಎಲ್ ಕಂಪನಿಯ ಅಧಿಕಾರಿಗಳು ಹಾಜರಾಗುವವರೆಗೆ ಮರಗಳ ಗುರುತು ಹಾಕಲು ಬಿಡುವುದಿಲ್ಲ ಎಂದು ಸಂಘಟನಕಾರರು ಎಚ್ಚರಿಸಿದರು.