ಬಳ್ಳಾರಿ ;ಯುವ ಸಮೂಹದಲ್ಲಿರುವ ಹೊಸತನವನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎ್ಕೆಸಿಸಿಐ ‘ಮಂಥನ’ ಹೆಸರಿನ ವಿಶೇಷ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಹೇಳಿದರು.
ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಂಥನ-2025 ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಶಕ್ತಿ ಬೆಳವಣೆಗೆ ಹಲವು ಕಾರ್ಯಕ್ರಮಗಳನ್ನು ನಮ್ಮ ಸಂಸ್ಥೆಯಿಂದ ಹಮ್ಮಿಕೊಂಡು ಬಡ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣಾ ಭಾಗದ ಬಡ ಮಹಿಳೆಯರಿಗೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಯಶ್ವಸಿಯಾಗಿದ್ದೇವೆ ಎಂದು ತಿಳಿಸಿದರು.
ಮಂಥನ ಸಮಿತಿ ಅಧ್ಯಕ್ಷೆ ಬಿ.ಎ. ತೇಜಶ್ರೀ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆ, ಕ್ರಿಯಾಶೀಲತೆಯ ಜತೆಯಲ್ಲಿ ಹೊಸ ವ್ಯವಹಾರಿಕ ಐಡಿಯಾ, ಬಂಡವಾಳ ಸಂಗ್ರಹ ಮತ್ತು ಹೂಡಿಕೆಯ ವಿಚಾರಗಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎ್ಕೆಸಿಸಿಐ ‘ಮಂಥನ-2025’ ಹಮ್ಮಿಕೊಂಡಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ಯುವಶಕ್ತಿಯಲ್ಲಿ ಸಾಕಷ್ಟು ಪ್ರತಿಭೆ ಇದೆ. ಈ ಭಾಗದ ಗ್ರಾಮೀಣರ ದೈನಂದಿನ ಸಮಸ್ಯೆಗಳಿಗೆ ಪರಿಹಾರಗಳಿವೆ. ಈ ಪರಿಹಾರಗಳ ಆಧುನಿಕತೆಯ ಸ್ಪರ್ಶ ನೀಡಿ ಪ್ರತಿಭೆ ಮತ್ತು ಪರಿಹಾರ ದೊಡ್ಡಮಟ್ಟದ ಯಶಸ್ಸನ್ನು ನೀಡಲು ಪ್ರಯತ್ನಿಸಲು ಸಾಧ್ಯ ಎಂದು ತಿಳಿಸಿದರು.
ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜ್ ಮಾತನಾಡಿ, ಎ್ಕೆಸಿಸಿಐ ಕೇವಲ ವ್ಯಾಪಾರ ಮತ್ತು ವಾಣಿಜ್ಯೋದ್ಯಮಿಗಳಿಗೆ ಸೀಮಿತವಾಗದೇ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ‘ಮಂಥನ’ ವಿಶೇಷ ಯೋಜನೆಯನ್ನು ರೂಪಿಸಿದೆ. ‘ಮಂಥನ’ ಯುವ ಮತ್ತು ಹೊಸ ಚಿಂತನೆಯ ಪ್ರತಿಭೆಗಳಿಗೆ ಮುಕ್ತ ಅವಕಾಶವನ್ನು ನೀಡುತ್ತದೆ ಎಂದರು.