ನಿತ್ಯ ಕಬ್ಬಿಣಾಂಶ ಮಾತ್ರೆ ಸೇವನೆ ಖಚಿತಪಡಿಸಿ

Published on

ಬಳ್ಳಾರಿ : ಗರ್ಭಿಣಿಯರು ನಿತ್ಯ ಒಂದರಂತೆ ಆರು ತಿಂಗಳು ಅವಧಿಯಲ್ಲಿ ಕನಿಷ್ಠ 180 ಕಬ್ಬಿಣಾಂಶ ಮಾತ್ರೆಗಳನ್ನು ಸೇವನೆ ಬಗ್ಗೆ ನಿರಂತರ ನಿಗಾವಹಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಪಂ ವಿಡಿಯೋ ಸಂವಾದ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯಲ್ಲಿ ಮಾತನಾಡಿದರು. ಗರ್ಭಿಣಿ ಮಹಿಳೆ ಎಂದು ತಿಳಿದ ಕೂಡಲೇ ಉಚಿತವಾಗಿ ತಾಯಿ ಕಾರ್ಡ್ ಒದಗಿಸಬೇಕು. ವೈದ್ಯರು ಆರೋಗ್ಯ ತಪಾಸಣೆ ಮಾಡಿದಾಗ ರಕ್ತದಲ್ಲಿ ಕಬ್ಬಿಣಾಂಶ ಪ್ರಮಾಣ ಕುರಿತು ಗರ್ಭಿಣಿ ಮಹಿಳೆಯರಿಗೆ ಮಾಹಿತಿ ನೀಡಬೇಕು. ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ನುಂಗುವುದರಿಂದ ಮಗುವಿನ ಬೆಳವಣಿಗೆ ಸರಿಯಾಗಿ ಆಗುವ, ಹೆರಿಗೆ ವೇಳೆ ರಕ್ತ ಕೊರತೆಯಾಗದಿರುವ ಕುರಿತು ತಿಳಿಸಬೇಕು. ಗರ್ಭಿಣಿಯರಿಗೆ ಪ್ರತಿದಿನ ಮನೆಗೆ ತೆರಳಿ ಪೌಷ್ಟಿಕ ಆಹಾರ ಒದಗಿಸಲು ಕಾರ್ಯಯೋಜನೆ ಹಾಕಿಕೊಂಡು ಗಂಡಾಂತರ ಗರ್ಭಿಣಿಯರ ಸಂಖ್ಯೆ ಕಡಿಮೆಯಾಗುವಂತೆ ವೈದ್ಯಾಧಿಕಾರಿಗಳು ಕ್ರಮವಹಿಸಬೇಕು ಎಂದು ಸೂಚಿಸಿದರು.

ಡಿಎಚ್‌ಒ ಡಾ.ವೈ.ರಮೇಶಬಾಬು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 7092 ಅಂಗಾಂಗ ದಾನ ನೋಂದಣಿ ಮಾಡಿಸಿ ರಾಷ್ಟ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು, ಇನ್ನೂ ನೋಂದಣಿ ಸಹ ಮಾಡಲಾಗುತ್ತಿದೆ ಎಂದರು.

ಬಳಿಕ ಗರ್ಭಿಣಿಯರ ಆರೈಕೆಯನ್ನು ಸಿಬ್ಬಂದಿಯವರ ಮೂಲಕ ಉತ್ತೇಜಿಸಲು ಪ್ರತಿ ತಿಂಗಳು ಒಬ್ಬ ಪ್ರಾಥಮಿಕ ಸುರಕ್ಷಾಧಿಕಾರಿ, ಆಶಾ ಕಾರ್ಯಕರ್ತೆಯರನ್ನು ಗುರುತಿಸಿ ಸನ್ಮಾನಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಟಿ.ಅರುಣಜ್ಯೋತಿ ಹಾಗೂ ಎ.ಚೌಡಮ್ಮ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net