ಬಳ್ಳಾರಿ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮೂಲಕ ಶೇ.100 ರಷ್ಟು ಪ್ರಗತಿ ಸಾಧಿಸಿ ಎಂದು ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿಯ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳಿಂದ ಹೊರಗುಳಿದ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಗ್ಯಾರಂಟಿ ಯೋಜನೆಗಳ ಲಾಭ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸರ್ಕಾರ ಯೋಜನೆಗಳನ್ನು ಜನ ಸಾಮಾನ್ಯರಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸಕಾಲದಲ್ಲಿ ಅವರಿಗೆ ಸೇವೆ ಒದಗಿಸಿದಾಗ ಮಾತ್ರ ಯೋಜನೆಗಳಿಗೆ ಸಾರ್ಥಕತೆ ದೊರಕುತ್ತದೆ. ಇದರಿಂದ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಮೇಲೆ ಉತ್ತಮ ಅಭಿಪ್ರಾಯ ಮೂಡುತ್ತದೆ ಎಂದರು.
ವಿವಿಧ ಕಾರಣಗಳಿಂದ ಫಲಾನುಭವಿಗಳಿಗೆ ಹಣ ಪಾವತಿಯಾಗದಿರುವ ಬಗ್ಗೆ ಕಚೇರಿಗೆ ದೂರು ಸಲ್ಲಿಕೆಯಾಗುತ್ತಿವೆ. ಅಧಿಕಾರಿಗಳು ಏನು ಕ್ರಮವಹಿಸಿದ್ದಿರಿ ಎಂಬುದಾಗಿ ಪ್ರಶ್ನಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‌ಕುಮಾರ ಪ್ರತಿಕ್ರಿಯಿಸಿ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮನೆಗಳಿಗೆ ಭೇಟಿ ನೀಡಿ ತಾಂತ್ರಿಕ ದೋಷವಿರುವ ಇ-ಕೆವೈಸಿ, ಎನ್‌ಪಿಸಿಐ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವಂತೆ ಫಲಾನುಭವಿಗಳಿಗೆ ತಿಳಿಸಲಾಗುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಆ. 2024 ರವರೆಗೆ ಜಿಲ್ಲೆಯಲ್ಲಿ ಒಟ್ಟು 1,39,58,781 ಫಲಾನುಭವಿಗಳಿಗೆ ಇದುವರೆಗೂ ಒಟ್ಟು 223.71 ಕೋಟಿ ರೂ. ಗಳ ಸಹಾಯಧನ ನೀಡಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸಕೀನಾ ತಿಳಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಯುವನಿಧಿ, ಗೃಹಜೋತ್ಯಿ, ಶಕ್ತಿಯೋಜನೆ ಅಧಿಕಾರಿಗಳು ತಿಂಗಳವಾರು ಮಾಹಿತಿಯನ್ನು ಸಭೆಗೆ ನೀಡಿದರು. ನಂತರ ಯುವನಿಧಿ ಯೋಜನೆಗೆ ನೋಂದಣಿಗೆ ಮಾಹಿತಿ ಕುರಿತ ಭಿತ್ತಿಚಿತ್ರ ಬಿಡುಗಡೆಗೊಳಿಸಿದರು.