ಗ್ರಂಥಾಲಯ ಸದ್ಭಳಕೆ ಮಾಡಿಕೊಳ್ಳಿ

Published on

ಬಳ್ಳಾರಿ : ಗ್ರಂಥಾಲಯದ ಪುಸ್ತಕಗಳು ಮತ್ತು ಅವುಗಳ ಮಾಹಿತಿಯು ಬಹಳ ಉಪಯುಕ್ತವಾಗಿದ್ದು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಎಲ್ಲ ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.

ನಗರದ ಕೇಂದ್ರ ಗ್ರಂಥಾಲಯ ಕಚೇರಿಯಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಬುಧವಾರ ನಡೆದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಗರ ಕೇಂದ್ರ ಗ್ರಂಥಾಲಯಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಮಹಾನಗರ ಪಾಲಿಕೆಯಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಂಡು ಗ್ರಂಥಾಲಯದ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಬಿ.ಕೆ.ಲಕ್ಷ್ಮೀಕಿರಣ್ ಮಾತನಾಡಿ, ನಗರ ಕೇಂದ್ರ ಗ್ರಂಥಾಲಯದ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಎಲ್ಲರೂ ಗ್ರಂಥಾಲಯದ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಯುಗದಲ್ಲಿ ಗ್ರಂಥಾಲಯಗಳ ಮಹತ್ವ ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿ, ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ಗ್ರಂಥಾಲಯದ ಉತ್ತಮ ಓದುಗರಲ್ಲಿ ಇಬ್ಬರಿಗೆ ಉತ್ತಮ ಓದುಗರ ಪ್ರಶಸ್ತಿಯನ್ನು ಹಾಗೂ ಗ್ರಂಥಾಲಯದ ಸದುಪಯೋಗ ಪಡೆದು ಸಾಧನೆ ಮಾಡಿದ ಇಬ್ಬರಿಗೆ ಸಾಧನೆಗೈದ ಉತ್ತಮ ಓದುಗ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು.

ಬಳ್ಳಾರಿ ಕೆಇಬಿಯ ಎಂಜಿನಿಯರ್ ಕೆ.ಟಿ.ಆಂಜನೆಯಲು ಮತ್ತು ಗಾಂಧಿನಗರ ನಿವಾಸಿ ವಿಜಯಲಕ್ಷ್ಮೀ ಇವರಿಬ್ಬರು ಉತ್ತಮ ಓದುಗ ಪ್ರಶಸ್ತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net