ಅಂಬುಲೆನ್ಸ್ ಸೇವೆ ಸದುಪಯೋಗ ಪಡಿಸಿಕೊಳ್ಳಿ

Published on

ಬಳ್ಳಾರಿ ; ಗ್ರಾಮೀಣ ಜನರ ಆರೋಗ್ಯ ಸೇವೆಗಳಿಗಾಗಿ ತುರ್ತು ಸಂದರ್ಭದಲ್ಲಿ ಉಪಯುಕ್ತವಾದ ಅಂಬುಲೆನ್ಸ್ ಸೇವೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಿಎಚ್‌ಒ ಡಾ.ವೈ. ರಮೇಶ್‌ಬಾಬು ಹೇಳಿದರು.

ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ವಿ.ಆರ್.ಕೆ.ಪಿ ಸ್ಪಾಂಜ್ ಅಂಡ್ ಪವರ್ ಪ್ಲಾಂಟ್, ತಾಂಡ ಹಾಗೂ ಹೊನ್ನಳ್ಳಿ ಗ್ರಾಮಗಳಿಗೆ ಒಳಗೊಂಡಂತೆ ತುರ್ತು ಸನ್ನಿವೇಶಗಳಲ್ಲಿ ಸಹಾಯಕವಾಗುವ ಮಿನಿ ಅಂಬುಲೆನ್ಸ್‌ಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯದ ಸಮಸ್ಯೆಗಳು ವ್ಯಕ್ತಿಗೆ ಯಾವ ಸಂದರ್ಭದಲ್ಲಿ ಯಾವ ರೀತಿ ಬರಬಹುದು ಯಾರಿಗೂ ಊಹಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಮನೆಯ ಹತ್ತಿರವೇ ಆಗಮಿಸಿ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದುಕೊಂಡು ಹೋಗುವ ಸೌಲಭ್ಯವನ್ನು ಅವಶ್ಯಕತೆ ಇರುವ ತುರ್ತು ಸಂದರ್ಭದಲ್ಲಿ ಪಡೆಯುವ ಮೂಲಕ ಸ್ವಾಸ್ಥೃ ಸಮಾಜ ನಿರ್ಮಾಣಕ್ಕೆ ಜನತೆಯು ಕೈ ಜೋಡಿಸಬೇಕು.

ಗರ್ಭಿಣಿ ಮಹಿಳೆಯರು, ಅಪಘಾತ ಸಂದರ್ಭದಲ್ಲಿ, ಬೆಂಕಿ ಅವಘಡ ಮತ್ತು ಇತರೆ ಯಾವುದೇ ತುರ್ತು ಸನ್ನಿವೇಶಗಳಲ್ಲಿ ಸದುಪಯೋಗ ಪಡಿಸಿಕೊಂಡು ಆರೋಗ್ಯ ಸುಧಾರಣೆಗೆ ಕೈ ಜೋಡಿಸಬೇಕು ಎಂದರು.

ವಿ.ಆರ್.ಕೆ.ಪಿ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ಸಂದೀಪ್ ಮಾತನಾಡಿ, ಸಿಎಸ್‌ಆರ್ ಅನುದಾನದಡಿ 8 ಲಕ್ಷ ರೂ. ವೆಚ್ಚದಲ್ಲಿ ಮಿನಿ ಅಂಬುಲೆನ್ಸ್ ಒದಗಿಸಲಾಗಿದ್ದು, ಇಬ್ಬರು ತರಬೇತಿ ಪಡೆದ ವಾಹನ ಚಾಲಕರು ಸರತಿಯ ಮೇಲೆ ಕಾರ್ಯನಿರ್ವಹಿಸುತ್ತಾರೆ. ಅಂಬುಲೆನ್ಸ್‌ನಲ್ಲಿ ಆಕ್ಸಿಜನ್ ಸೌಲಭ್ಯ ಹೊಂದಿದ ಬೆಡ್‌ನೊಂದಿಗೆ ರೋಗಿಗಳೊಂದಿಗೆ ಪಾಲಕರು ಕುಳಿತುಕೊಳ್ಳುವ ಆಸನದ ವ್ಯವಸ್ಥೆಯಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net