ಮೆಕ್ಕೆಜೋಳ ಬೆಲೆ ದಿಢೀರ್ ಕುಸಿತ

Published on

ಬಳ್ಳಾರಿ : ಜಿಲ್ಲಾದ್ಯಂತ ಕಳೆದ ಕೆಲ ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದ ಭತ್ತ, ತೊಗರಿ, ಮುಸುಕಿನ ಜೋಳ ಸೇರಿದಂತೆ ನಾನಾ ಬೆಳೆಗಳು ಸಮೃದ್ಧಿಯಾಗದೆ ನಲುಗಿವೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಿಂದಾಗಿ ರೈತರು ಬಿತ್ತನೆ ಮಾಡಿದ ನಂತರ ಯೂರಿಯಾ ರಸಗೊಬ್ಬರ ಅಭಾವದಿಂದ ಖಾಸಗಿ ಮಳಿಗೆಗಳಲ್ಲಿ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ನೀಡಿ ತೆಗೆದುಕೊಂಡು ಬೆಳೆಗಳಿಗೆ ಹಾಕಲಾಗಿದೆ. ಈ ಬಾರಿ ರೈತರು ಅಧಿಕ ಇಳುವರಿ ನಿರೀಕ್ಷೆಯೊಂದಿಗೆ ಮೆಣಸಿನಕಾಯಿ ಬೆಳೆಗಿಂತ ಹತ್ತಿ, ಜೋಳ, ಮೆಕ್ಕಜೋಳ, ಭತ್ತ ಸೇರಿದಂತೆ ನಾನಾ ಬೆಳೆಗಳನ್ನು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ. ಆದರೆ, ನಿರಂತರ ಸುರಿದ ಮಳೆಯಿಂದ ತೇವಾಂಶ ಹೆಚ್ಚಿದ್ದರಿಂದ, ರೈತರು ಬಿತ್ತನೆ ಮಾಡಿದ ಜೋಳವು ತೇವಾಂಶ ಹೆಚ್ಚಾಗಿ ಬೆಳೆ ಪೂರ್ಣ ಪ್ರಮಾಣದಲ್ಲಿ ನಾಟಿಯಾಗಿಲ್ಲ. ಮಳೆ ಸುರಿದು ಬೆಳೆ ಹಾಳಾಗಿದ್ದು ಒಂದಡೆಯಾದರೆ, ಎರಡ್ಮೂರು ದಿನಗಳವರೆಗೆ ಮೋಡ ಮುಸುಕಿದ ವಾತಾವರಣದಿಂದ ನಾನಾ ಬೆಳೆಗಳಿಗೆ ಹುಳುಗಳ ಕಾಟ ಹೆಚ್ಚಿವೆ. ಹತೋಟಿಗೆ ತರಲು ಸಾವಿರಾರು ವ್ಯಯಿಸಿ ಔಷಧ ಸಿಂಪರಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಲ್ಪ ಪ್ರಮಾಣದಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆಗೆ ಕೀಟಗಳ ಬಾಧೆಯಿಂದ ಎಲೆಗಳಿಗೆ ಮುದುರಿವೆ. ಹೂ - ಕಾಯಿ ಕಟ್ಟುವ ಹಂತದವರೆಗೂ ಹತ್ತಿ ಬೆಳೆ ಸಮೃದ್ಧವಾಗಿ ಬೆಳೆದಿತ್ತು. ಸತತ ಸುರಿದ ಮಳೆಯಿಂದ ಹತ್ತಿ ಕಾಯಿಗಳಿಗೆ ಕೀಟಗಳ ಕಾಟದಿಂದ ಇರುಕು ಹೊಡೆಯುವ ಜತೆಗೆ ಗಿಡಗಳಲ್ಲೇ ಕಾಯಿಗಳು ಕೊಳೆಯುತ್ತಿವೆ. ಹತ್ತಿಯೂ ಬಿಳಿಯಾಗಿ ಇರದೆ ಕಪ್ಪು ಬಣ್ಣಕ್ಕೆ ತಿರುಗುವುದರಿಂದ ಬೆಲೆ ಕೂಡ ಕುಸಿಯುತ್ತಿದೆ. 80 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಭತ್ತಕ್ಕೆ ಸದ್ಯ ಯಾವುದೇ ರೋಗಗಳು ಕಾಣಿಸಿಲ್ಲ. ಹೊಸದಾಗಿ ಇಲಿಗಳು ಭತ್ತದ ಬೆಳೆಯನ್ನು ಕಡಿದು ಹಾಳು ಮಾಡುತ್ತಿರುವುದರಿಂದ ಸಮೃದ್ಧಿಯಾಗಿ ಬೆಳೆದಿಲ್ಲ.

105 % ಬಿತ್ತನೆ : ಪ್ರಸ್ತಕ ಸಾಲಿನ ಮುಂಗಾರಿನಲ್ಲಿ 1,63,754 ಹೆಕ್ಟೇರ್ ಗುರಿ ಹೊಂದಿತ್ತು. ಇದರಲ್ಲಿ 1,71,636 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಬೆಳೆದಿದ್ದು, ಒಟ್ಟಾರೆ ಶೇ. 105 ರಷ್ಟು ಬಿತ್ತನೆಯಾಗಿದೆ. ಇದರಲ್ಲಿ ಮೆಣಸಿಕಾಯಿ ಬೆಳೆ ಪ್ರದೇಶ ಕಡಿಮೆಯಾಗಿದ್ದು, ಅದರ ಬದಲಾಗಿ ಹೆಚ್ಚಿನ ಪ್ರಮಾಣದಲ್ಲಿ ಮುಸುಕಿನ ಜೋಳ, ತೊಗರಿ ಹಾಗೂ ಹತ್ತಿ ಬೆಳೆಯಲಾಗಿದೆ. ಸದ್ಯ, ಹಿಂಗಾರಿನಲ್ಲಿ 38 ಸಾವಿರ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಿಲಾಗಿದ್ದು, ಬಿತ್ತನೆ ನಡೆಯುತ್ತಿದೆ.

ಮುಸುಕಿನ ಜೋಳ ಕುಸಿತ : ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಚಿಲ್ಲಿ ಬದಲು ಮುಸುಕಿನ ಜೋಳ ಬೆಳೆದಿರುವ ರೈತರು ಕಟಾವು ಮೊದಲೇ ಅತಂಕ ತಂದಿದೆ. ಕಳೆದ ವರ್ಷ ಕ್ವಿಂಟಾಲ್‌ಗೆ 3500 ರಿಂದ 3800 ರೂ. ಇತ್ತು. ಆದರೆ, ಏಕಾಏಕಿ 2200 ರೂ. ಬೆಲೆ ಕುಸಿದಿದೆ. ಇದರಿಂದ ಹಲವು ರೈತರು ಮುಸುಕಿನ ಜೋಳ ಕಟಾವು ಮಾಡದೆ ಬೆಲೆ ಹೆಚ್ಚಲಿದೆ ಎಂಬ ಉದ್ದೇಶದಿಂದ ಜಮೀನಿನಲ್ಲಿಯೇ ಬಿಟ್ಟಿದ್ದಾರೆ. ಇತ್ತ ದಲ್ಲಾಳಿಗಳು ಬೆಳೆ ಒಣಗಿಸದೆ ಹಸಿ ಮುಸುಕಿನ ಜೋಳ ಮಾರುಕಟ್ಟೆ ತರುವುದರಿಂದ ಬೆಲೆ ಕುಸಿದಿದೆ ಎಂಬುದಾಗಿ ಹೇಳುತ್ತಿದ್ದಾರೆ. ನಿರಂತರ ಮಳೆಯಿಂದ ರೈತರು ಒಣಗಿಸಲು ಪರದಾಡುವಂತೆ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೋಟ್.. ಜಿಲ್ಲೆಯಲ್ಲಿ ಕೀಟ ಹಾಗೂ ರೋಗಗಳು ಕಾಣಿಸಿಕೊಂಡಿರುವ ಬೆಳೆಗಳನ್ನು ಪರಿಶೀಲಿಸಲು ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಲಿದೆ. ಈಗಾಗಲೇ ರೈತರಿಗೆ ಯಾವ ಬೆಳೆಗೆ ಏನೆಲ್ಲಾ ಮುಂಜಾಗೃತೆ ವಹಿಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ.

- ಸೋಮಸುಂದರ್, ಜಂಟಿ ಕೃಷಿ ನಿರ್ದೇಶಕ, ಕೃಷಿ ಇಲಾಖೆ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net